Monday, 26 October 2020

ಮೆಟ್ರಿಕ್ ಮೇಳದ ಪರಿಕಲ್ಪನೆ

Admin       Monday, 26 October 2020

 ಮೀಟರ್ ಶಬ್ದದ ಅರ್ಥ : 1. ಪರಿಚಯ-ಪರಿಕಲ್ಪನೆ ಮೀಟರ್  ಎಂಬ ಶಬ್ದದ ಉತ್ಪತ್ತಿಯು ಫ್ರೆಂಚ್ ಶಬ್ದ metre ನಿಂದ ಆಯಿತು. ಅಳತೆ ಮಾಡುವುದು  ಎಂದು ಈ ಶಬ್ದದ ಅರ್ಥ. 18 ನೇ ಶತಮಾನದಲ್ಲಿ French Academy of Sciences for system of weights and measures ದಶಮಾನ ಪದ್ದತಿಯನ್ನು ಅಳವಡಿಸಿಕೊಂಡಾಗ ಮೀಟರ್‌ನ್ನು ಉದ್ದವನ್ನು ಅಳೆಯುವ ಏಕಮಾನವಾಗಿ ಬದಲಾಯಿಸಿದರು. ಉತ್ತರ ಧ್ರುವ ಮತ್ತು ಸಮಭಾಜಕವೃತ್ತದ ನಡುವಿನ ದೂರದ 10 ಮಿಲಿಯನ್ನ ಒಂದು ಭಾಗವೆಂದು ಮೀಟರ್‌ನ್ನು ವ್ಯಾಖ್ಯಾಯಿಸಲಾಗಿದೆ. ಕಾಲಾಂತರದಲ್ಲಿ ಇತರೆ ಅಳತೆಗಳನ್ನು ಒಟ್ಟಾಗಿ ಸೇರಿ ಮೆಟ್ರಿಕ್ ಸಿಸ್ಟಮ್ ಎಂದು ಕರೆದರು. ಹೀಗೆ ಮೀಟರ್ ಪದದಿಂದ ಬಂದ ಮೆಟ್ರಿಕ್ ಎಂದರೆ ಅಂತಾರಾಷ್ಟ್ರೀಯವಾಗಿ ಮಾನ್ಯತೆಗೊಂಡ ದಶಮಾನ ಪದ್ದತಿಯಲ್ಲಿನ ಅಳತೆಮಾನಗಳ ವ್ಯವಸ್ಥೆಯನ್ನು ಮೆಟ್ರಿಕ್ ವ್ಯವಸ್ಥೆ ಎನ್ನುತ್ತೇವೆ.

 ಮೆಟ್ರಿಕ್ ಮೇಳದ ಪರಿಕಲ್ಪನೆ:

ಮೆಟ್ರಿಕ್ ಮೇಳವು ಅಳತೆ ಮತ್ತು ತೂಕಗಳಿಗೆ ಸಂಬಂಧಿಸಿದ ಹಬ್ಬವಾಗಿದೆ. ಕಾರ್ಯಕ್ರಮವನ್ನು ಇಷ್ಟಕ್ಕೆ ಸೀಮಿತಗೊಳಿಸದೇ ಗಣಿತದ ಹಲವಾರು ರಂಜನೀಯ ಸೌಂದರ್ಯವನ್ನು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಮುದಾಯದ ಸದಸ್ಯರೊಂದಿಗೆ ವಿನಿಮಯ ಮಾಡಿಕೊಳ್ಳಲು ಈ ಕಾರ್ಯಕ್ರಮ/ಯೋಜನೆಯನ್ನು ರೂಪುಗೊಳಿಸಲಾಗುತ್ತಿದೆ.

ಮಕ್ಕಳಲ್ಲಿ ಅಳತೆಯ ಬಗ್ಗೆ ನಿಖರವಾದ ಪರಿಕಲ್ಪನೆ ಬಹಳ ಕಡಿಮೆ ಇರುವುದು ಇತ್ತೀಚಿನ ದಿನಗಳಲ್ಲಿ ಕೆ.ಎಸ್.ಕ್ಯೂ.ಎ.ಓ ಅಧ್ಯಯನದಿಂದ ತಿಳಿದು ಬಂದಿದೆ. ಅಳತೆಯ ಸರಿಯಾದ ಕ್ರಮವಾಗಲಿ ಅಥವಾ ಅಂದಾಜು ಮಾಡುವ ಪರಿಕಲ್ಪನೆಯಾಗಲಿ ಮಕ್ಕಳಲ್ಲಿ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಅಳತೆಗಳ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಹೀಗಾಗಿ ಅಳತೆಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ನಾವು ಮಕ್ಕಳಿಗೆ ರೂಪಿಸಬೇಕು. ಮೆಟ್ರಿಕ್ ಮೇಳದಲ್ಲಿ ಮಕ್ಕಳು ಮುಖ್ಯವಾಗಿ ಮೂಲಭೂತ ಅಳತೆಗಳಾದ ಉದ್ದ, ರಾಶಿ, ಕಾಲ ಮತ್ತು ಉಷ್ಣತೆ ಇವುಗಳನ್ನು ಅಳತೆ ಮಾಡುವುದನ್ನು ಕಲಿಯಬೇಕು. ಇವುಗಳನ್ನು ಕಲಿಸಲು ಅಗತ್ಯ ಚಟುವಟಿಕೆಗಳನ್ನು ಮೇಳದಲ್ಲಿ ಕ್ರಮವಾಗಿ ರೂಪಿಸಬೇಕು.

ಮೆಟ್ರಿಕ್ ಮೇಳ ಉದ್ದೇಶ :

  • ಮೂಲಭೂತ ಅಳತೆಗಳಾದ ಉದ್ದ, ರಾಶಿ, ಕಾಲ ಮತ್ತು ಉಷ್ಣತೆ ಇವುಗಳನ್ನು ನಿಖರವಾಗಿ ಅಳತೆ ಮಾಡುವುದನ್ನು ಮಕ್ಕಳಿಗೆ ಕಲಿಸುವುದು.
  • ಸಾಂಪ್ರದಾಯಿಕ ಅಳತೆಗಳನ್ನು ಮೆಟ್ರಿಕ್ ಅಳತೆಮಾನದೊಂದಿಗೆ ಹೋಲಿಸುವುದು.
  • ವಿದ್ಯಾರ್ಥಿಗಳಲ್ಲಿ ಗಣಿತದ ಭಯವನ್ನು ನಿವಾರಣೆ ಮಾಡುವುದು.
  • ಗಣಿತ ಕಲಿಕೆಗೆ ಸಂಬಂಧಿಸಿದಂತೆ ಹಲವಾರು ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು.
  • ವಿದ್ಯಾರ್ಥಿಗಳ ನಿತ್ಯ ಜೀವನದೊಂದಿಗೆ ಗಣಿತ ಬೆಸೆದುಕೊಂಡಿರುವುದನ್ನು ಪರಿಚಯಿಸುವುದು.
  • ವಿದ್ಯಾರ್ಥಿಗಳ ಬಾಲ್ಯದ ಆಟಗಳನ್ನು ಗಣಿತ ಕಲಿಕೆಯಲ್ಲಿ ಅಳವಡಿಸುವುದು.

ಮೆಟ್ರಿಕ್ ಮೇಳ ಏಕೆ ? ಅದರ ಮಹತ್ವ :

ನಿತ್ಯ ಜೀವನದಲ್ಲಿ ಇತರರೊಡನೆ ವ್ಯವಹರಿಸುವಾಗ ಅಳತೆ ಅನಿವಾರ್ಯ. ಪ್ರತಿದಿನ ನಾವು ನಮ್ಮ ಸುತ್ತಮುತ್ತ ಇರುವ ಹಲವಾರು ವಸ್ತುಗಳನ್ನು ನೋಡುತ್ತೇವೆ.


ಚಿತ್ರದಲ್ಲಿ AB ಮತ್ತು PQ ಎಂಬ ಎರಡು ರೇಖೆಗಳನ್ನು ಕೊಟ್ಟಿದೆ. ಇವುಗಳನ್ನು ಅವಲೋಕಿಸಿದಾಗ ಒಂದು ರೇಖೆ ದೊಡ್ಡದಾಗಿಯೂ, ಇನ್ನೊಂದು ಚಿಕ್ಕದಾಗಿಯೂ ಕಾಣುತ್ತದೆ. ಎಷ್ಟೇ ಗಮನವಿಟ್ಟು ನೋಡಿದಾಗಲೂ ಅವುಗಳಲ್ಲಿ ಒಂದು ದೊಡ್ಡದಾಗಿಯೂ ವಾಸ್ತವವಾಗಿ ಎರಡೂ ರೇಖೆಗಳ ಅಳತೆಯು ಒಂದೇ ಆಗಿರುತ್ತದೆ. ಚಿತ್ರದಲ್ಲಿನ ಎರಡೂ ರೇಖೆಗಳನ್ನು ಸ್ಕೇಲ್ನಿಂದ ಅಳತೆ ಮಾಡಿ ನೋಡಿ. ನಿಮಗೆ ಕಂಡು ಬರುವುದೇನು ?

ಹಾಗೆಯೇ ಪಕ್ಕದ ಚಿತ್ರದಲ್ಲಿ ಎರಡು ಆಕಾರಗಳಿವೆ. ಎರಡೂ ಆಕಾರಗಳನ್ನು ಗಮನಿಸಿದಾಗ, ಮೇಲಿನ ಆಕಾರ ಚಿಕ್ಕದಾಗಿಯೂ, ಕೆಳಗಿನದ್ದು ದೊಡ್ಡದಾಗಿಯೂ ಕಾಣುತ್ತದೆ. ಆದರೆ ಈ ಎರಡೂ ಆಕಾರಗಳನ್ನು ಕತ್ತರಿಸಿ ಒಂದರ ಮೇಲೊಂದು ಇರಿಸಿ ಅಳತೆ ಮಾಡಿದಾಗ ಎರಡೂ ಆಕಾರಗಳು ಒಂದೇ ಆಗಿರುವುದು. ನಮ್ಮ ಗಮನಕ್ಕೆ ಬರುತ್ತದೆ. ಅಂದರೆ ಕೇವಲ ನೋಟದಿಂದ ವಸ್ತುವಿನ ಖಚಿತ ಸ್ವರೂಪ ಗೊತ್ತಾಗುವುದಿಲ್ಲ. ಯಾವುದೇ ವಸ್ತುವಿನ ಅಳತೆಯನ್ನು ಅಂದಾಜು ಮಾಡಬಹುದಷ್ಟೇ. ಆದರೆ ಅಂದಾಜು, ನಿಖರವಾದ ಅಳತೆಯಾಗುವುದಿಲ್ಲ. ಇದರ ಅರ್ಥ ವಸ್ತುವಿನ ನಿಖರವಾದ ಸ್ವರೂಪ ತಿಳಿಯಬೇಕಾದರೆ ಅಳತೆ ಅನಿವಾರ್ಯ.

ಸೇಬು ಮತ್ತು ಕುಂಬಳಕಾಯಿಗಳಲ್ಲಿ ಯಾವುದು ದೊಡ್ಡದು ? ಉತ್ತರ ಬಹಳ ಸುಲಭ. ಕುಂಬಳಕಾಯಿ ದೊಡ್ಡದು, ಸೇಬು ಚಿಕ್ಕದು. ಕುಂಬಳಕಾಯಿ ಎಷ್ಟು ದೊಡ್ಡದು? ಉತ್ತರ ಮೊದಲಿನಷ್ಟು ಸುಲಭವೇ ? ಇಲ್ಲ. ನಾವು ಖಚಿತವಾದ ಉತ್ತರ ನೀಡಬೇಕಾದರೆ ಅವುಗಳನ್ನು ನಾವು ಅಳತೆ ಮಾಡಲೇಬೇಕು. ಹೀಗೆ ಪ್ರತಿನಿತ್ಯ ನಾವು ವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ವ್ಯವಹಾರದಲ್ಲಿಯೂ ಕೂಡ ಅಳತೆ ಅನಿವಾರ್ಯ.

ಉದಾಹರಣೆಗೆ ಅಂಗಡಿಯವನು ಅಕ್ಕಿ, ಬೇಳೆ, ಸಕ್ಕರೆ ಮುಂತಾದ ದಿನಸಿಗಳನ್ನು ಕಿ.ಗ್ರಾಂ. ಗಳಲ್ಲಿ ತೂಕ ಮಾಡಿ ಕೊಡುತ್ತಾನೆ. ಎಣ್ಣೆಯನ್ನು ಲೀಟರ್ಗಳಲ್ಲಿ ಅಳತೆ ಮಾಡುತ್ತಾನೆ. ಕಾರಿನ ಚಕ್ರಕ್ಕೆ ಗಾಳಿ ತುಂಬಿಸುವಾಗಲೂ ಕೂಡ ಗಾಳಿಯ ಒತ್ತಡವನ್ನು ಒಂದು ನಿರ್ದೀಷ್ಟ ಅಳತೆಯಲ್ಲಿಯೇ ತುಂಬಿಸುತ್ತಾರೆ. ಈ ಎಲ್ಲಾ ವ್ಯವಹಾರದಲ್ಲಿ ನಾವು ಎಣಿಸಿ ಹಣ ನೀಡುತ್ತೇವೆ.

ದೈನಂದಿನ ಚಟುವಟಿಕೆಗಳಲ್ಲಿ ಈ ಅಳತೆಮಾನಗಳ ಪರಿಕಲ್ಪನೆ ಅರ್ಥೈಸಿ ಅವುಗಳನ್ನು ಬಳಕೆ ಮಾಡುವ ಕೌಶಲವನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ. ಆದ್ದರಿಂದ ಅಳತೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಶಾಲೆಗಳಲ್ಲಿ ಆಯೋಜಿಸಿವುದೇ ಮೆಟ್ರಿಕ್ ಮೇಳವಾಗಿದೆ.

ಮೆಟ್ರಿಕ್ ಮೇಳದಲ್ಲಿ ಅಳತೆ ಮಾಡುವುದು ಏನನ್ನು ?

ಉದ್ದ (l), ರಾಶಿ (m), ಕಾಲ (t) ಮತ್ತು ಉಷ್ಣತೆ (T) ಇವುಗಳನ್ನು `ಮೂಲಭೂತ ಭೌತಿಕ ಪರಿಮಾಣ' ಗಳೆಂದು ಹೇಳುತ್ತಾರೆ. ಉದ್ದವನ್ನು ಮೀಟರಿನಲ್ಲಿ, ರಾಶಿಯನ್ನು ಕಿಲೋಗ್ರಾಂಗಳಲ್ಲಿ, ಕಾಲವನ್ನು ಸೆಕೆಂಡ್ಗಳಲ್ಲಿ ಅಳತೆಮಾಡುತ್ತಾರೆ. ಆದ್ದರಿಂದ ಮೀಟರ್, ಕಿಲೋಗ್ರಾಂ ಮತ್ತು ಸೆಕೆಂಡ್ ಇವನ್ನು `ಮೂಲಮಾನ' (Basic Unit) ಗಳೆಂದು ಕರೆಯುತ್ತಾರೆ. ಇವುಗಳನ್ನು ಆಧರಿಸಿ ರೂಪುಗೊಂಡ ಮಾನಗಳಿಗೆ `ನಿಷ್ಟನ್ನಮಾನ' (Derived Units) ಗಳೆಂದು ಹೇಳುತ್ತಾರೆ.

ಉದಾಹರಣೆಗೆ : ವೇಗ = ದೂರ/ಕಾಲ = ಮೀಟರ್/ಸೆಕೆಂಡ್

ಹೀಗೆ ಮೆಟ್ರಿಕ್ ಮೇಳದಲ್ಲಿ ಹಲವಾರು ಭೌತಿಕ ಪರಿಮಾಣಗಳು ಮತ್ತು ಭೌತಿಕ ಘಟನೆಗಳ ಕುರಿತಾದ ವಿವಿಧ ಅಂಶಗಳನ್ನು ಮಕ್ಕಳು ಅಳತೆ ಮಾಡುತ್ತಾರೆ. ತನ್ಮೂಲಕ ಅವುಗಳ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಅರಿತುಕೊಳ್ಳುತ್ತಾರೆ.

ಅಳತೆಯ ಮಾನಗಳು ನಡೆದುಬಂದ ದಾರಿ ಮತ್ತು ಅಗತ್ಯತೆ ..... 

ಆದಿಮಾನವನು ಗೆಡ್ಡೆಗೆಣಸುಗಳನ್ನು ತಿಂದು ಬದುಕುತ್ತಿದ್ದ. ಬೇಟೆಯಾಡಿ ಪ್ರಾಣಿಗಳ ಮಾಂಸವನ್ನು ಕೂಡ ತಿನ್ನುತ್ತಿದ್ದ. ಕ್ರಮೇಣ ಮಾಂಸವನ್ನು ಬೇಯಿಸಿ ತಿನ್ನಲಾರಂಭಿಸಿದ. ನಾಗರೀಕತೆ ಬೆಳೆದಂತೆ ವ್ಯವಸಾಯವನ್ನು ಆರಂಭಿಸಿದ. ಅದಕ್ಕಾಗಿ ಕಾಡು ಕಡಿದು ಹೊಲ- ಗದ್ದೆಗಳನ್ನು ನಿಮರ್ಿಸಿಕೊಂಡ. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರಗಳನ್ನು ಗುರುತಿಸಿಕೊಳ್ಳಲು ಅಳತೆ ಮಾಡಬೇಕಾಯಿತು. ಅದಕ್ಕಾಗಿ ಅವರು ಬಳಸಿದ್ದು ``ಹೆಜ್ಜೆಗಳನ್ನು''. ತಾನು ಬೆಳೆದ ಬೆಳೆಯನ್ನು ಇನ್ನೊಬ್ಬರೊಡನೆ ವಿನಿಮಯ ಮಾಡಿಕೊಳ್ಳಲು ಬೊಗಸೆಯನ್ನೇ ಮಾನವಾಗಿ ಬಳಸಿದ. ಹೀಗೆ ಆರಂಭದಲ್ಲಿ ಮಾನವನು ಅಳತೆಯ ಮಾನವಾಗಿ ಬಳಸಿದ್ದು ತನ್ನ ದೇಹದ ಅಂಗಗಳನ್ನೇ. ಹೀಗೆ ರೂಪುಗೊಂಡು ಮಾನಗಳೆಂದರೆ ಗೇಣು, ಮೊಳ, ಮಾರು ಮುಂತಾದವು.

ಮಾನವ ದೇಹದ ಅಂಗಗಳನ್ನು ಅಳತೆಯ ಮಾನಗಳಾಗಿ ಬಳಸಿದಾಗ ಒಂದು ತೊಂದರೆ ಉದ್ಭವಿಸಿತು. ಪ್ರತಿಯೊಬ್ಬರ ಅಂಗಗಳ ಅಳತೆ ಒಂದೇ ಆಗಿರುವುದಿಲ್ಲ ತಾನೆ! ಆದ್ದರಿಂದ ಒಬ್ಬನೇ ವ್ಯಕ್ತಿಯ ಅಂಗಗಳನ್ನು ಪ್ರಮಾಣವಾಗಿ ತೆಗೆದುಕೊಳ್ಳಲು ಯೋಚಿಸಿದರು. ಯಾವ ವ್ಯಕ್ತಿಯನ್ನು ಪರಿಗಣಿಸಬೇಕು ? ಒಂದು ರಾಜ್ಯದ ಪ್ರಮುಖ ವ್ಯಕ್ತಿ ಎಂದರೆ ರಾಜ. ರಾಜನ ಪಾದದ ಅಳತೆಯನ್ನು ಒಂದು `ಅಡಿ' (ಫುಟ್) ಹುಟ್ಟಿಕೊಂಡಿತು. ರಾಜನು ಒಂದು ಕೈಯನ್ನು ಚಾಚಿ ನಿಂತಾಗ, ಆತನ ಮೂಗಿನ ತುದಿಯಿಂದ ಮಧ್ಯದ ಬೆರಳಿನ ತುದಿಯವರೆಗಿನ ದೂರವನ್ನು ಒಂದು `ಗಜ' ಎಂದು ಪರಿಗಣಿಸಿದರು. ಇದರಿಂದಲೂ ಸಹ ಎಲ್ಲ ಸಮಸ್ಯೆ ಪರಿಹಾರವಾಗಲಿಲ್ಲ. ಯಾಕೆಂದರೆ ಒಬ್ಬ ರಾಜ ಸತ್ತು, ಹೊಸ ರಾಜ ಪಟ್ಟಕ್ಕೆ ಬಂದಾಗ ಈ ಅಳತೆಗಳೆಲ್ಲ ಬದಲಾಗುತ್ತಿದ್ದವು.

ನಮ್ಮ ದೇಶದಲ್ಲಿ ಮತ್ತು ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ಹಲವಾರು ಬಗೆಯ ಅಳತೆಯ ಮಾನಗಳು ಬಳಕೆಯಲ್ಲಿದ್ದವು. ಈ ಕೆಳಗೆ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ.

ಸಾಂಪ್ರದಾಯಿಕ ಅಳತೆಗಳು 

1 ಕೊಳಗ-4 ಸೇರು 

1 ಸೇರು-4 ಪಾವು 

1 ಪಾವು-4 ಸೊಲಗೆ 

1 ಸೊಲಗೆ-2 ಚಟಾಕು 

1 ಕಂಡಿಗೆ-80 ಸೇರು 

1 ಪಲ್ಲ-100 ಸೇರು 

ಕಾಲಕ್ರಮೇಣ ದೇಶ ವಿದೇಶಗಳ ನಡುವೆ ಸಂಪರ್ಕವೇರ್ಪಟ್ಟಿತು. ಅವುಗಳ ನಡುವೆ ರಫ್ತು ಮತ್ತು ಆಮದು ಆರಂಭವಾಯಿತು. ಆಗ ಪ್ರಪಂಚದಾದ್ಯಂತ ಏಕರೂಪ ಅಳತೆಮಾನಗಳು ಅಗತ್ಯವಾಯಿತು. ತತ್ಪರಿಣಾಮವಾಗಿ ಹುಟ್ಟಿಕೊಂಡ ಮಾನಗಳೆಂದರೆ ಫುಟ್, ಪೌಂಡ್, ಕಿಲೋಗ್ರಾಂ, ಮೀಟರ್.

ಅಳತೆಯ ನಿಖರ ಮಾನದಂಡ

ಫ್ರಾನ್ಸ್ ದೇಶದ ಸೆವ್ರೆ ಎಂಬ ಪಟ್ಟಣದಲ್ಲಿ ಅಂತರರಾಷ್ಟ್ರೀಯ ತೂಕ ಮತ್ತು ಅಳತೆಯ ಕಛೇರಿ ಇದೆ. ಅಲ್ಲಿ ಪ್ಲಾಟಿನಂ ಮತ್ತು ಇರಿಡಿಯಂ ಮಿಶ್ರಲೋಹದ ದಂಡವಿದ್ದು ಅದರ ಮೇಲೆ ಎರಡು ಚಿನ್ನದ ಬಿಲ್ಲೆಗಳನ್ನು ಅಂಟಿಸಿದೆ. ಆ ಬಿಲ್ಲೆಗಳ ಮೇಲೆ ಒಂದೊಂದು ಗೆರೆ ಕೊರೆಯಲಾಗಿದೆ. ಶೂನ್ಯ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಆ ಗೆರೆಗಳ ನಡುವಿನ ದೂರವನ್ನು `ಒಂದು ಮೀಟರ್' ಎಂದು ಪರಿಗಣಿಸುತ್ತಾರೆ.

ಫ್ರಾನ್ಸ್ ದೇಶದ ಸೆವ್ರೆ ಎಂಬ ಪಟ್ಟಣದಲ್ಲಿ ಅಂತರರಾಷ್ಟ್ರೀಯ ತೂಕ ಮತ್ತು ಅಳತೆಯ ಕಛೇರಿ ಇದೆ. ಅಲ್ಲಿ ಪ್ಲಾಟಿನಂ ಮತ್ತು ಇರಿಡಿಯಂ ಮಿಶ್ರ ಲೋಹದ ಘನ ಸಿಲಿಂಡರ್ ಇದೆ. ಅದರ ತೂಕವನ್ನು `ಒಂದು ಕಿಲೋಗ್ರಾಂ' ಎಂದು ಪರಿಗಣಿಸಲಾಗಿದೆ.

ತೂಕದ ಅಳತೆಮಾನಗಳು :

ಮೆಟ್ರಿಕ್ ಪದ್ಧತಿ                                    ಇಂಪೀರಿಯಲ್ ಪದ್ಧತಿ 

1000 ಮಿಲಿಗ್ರಾಂಗಳು = 1 ಗ್ರಾಂ.             16 ಗ್ರಾಮ್ಸ್ = 1 ಔನ್ಸ್ 

1000 ಗ್ರಾಂ ಗಳು = 1 ಕಿಲೋಗ್ರಾಂಗಳು      16 ಔನ್ಸ್ = 1 ಪೌಂಡ್ 

100 ಕಿಲೋಗ್ರಾಂಗಳು = 1 ಕ್ವಿಂಟಾಲ್       14 ಪೌಂಡ್ಸ್ = 1 ಸ್ಟೋನ್ 

10 ಕ್ವಿಂಟಲ್ = 1 ಟನ್                               2 ಸ್ಟೋನ್ಸ್ = 1 ಕ್ವಾರ್ಟರ್ 

ಇತರ ವಿಷಯಗಳೊಂದಿಗೆ ಮೆಟ್ರಿಕ್ ಮೇಳದ ಸಂಬಂಧ

ಮೆಟ್ರಿಕ್ ಮೇಳದಲ್ಲಿ ಗಣಿತದ ಪರಿಕಲ್ಪನೆಗಳನ್ನು ಇತರ ವಿಷಯಗಳೊಂದಿಗೆ ಒಟ್ಟು ಸೇರಿಸಿ,ಪರಸ್ವರ ಸಂಬಂಧ ಕಲ್ಪಿಸಿ ಮತ್ತು ನಮ್ಮ ದಿನ ನಿತ್ಯ ಜೀವನದ ಒಂದು ಭಾಗವನ್ನಾಗಿ ಮಾಡಿದಾಗ ಗಣಿತದ ಪರಿಕಲ್ಪನೆಗಳನ್ನು ಉತ್ಸಾಹ ಮತ್ತು ವಿನೋದ ಪೂರ್ವಕವಾಗಿ ಕಲಿಯುತ್ತೇವೆ. ಮೆಟ್ರಿಕ್ ಮೇಳದ ಪ್ರತಿಯೊಂದು ಚಟುವಟಿಕೆಯ ಗಣಿತದ ಪರಿಕಲ್ಪನೆಗಳು ನಿತ್ಯ ಜೀವನದಲ್ಲಿ ಮತ್ತು ಇತರ ವಿಷಯಗಳೊಂದಿಗೆ ಹೇಗೆ ಸುಸಂಬದ್ಧವಾಗಿದೆ ಎಂದು ಅರಿಯಲು ಒಂದು ಪ್ರಮುಖ ಅಂಶವಾಗಿದೆ. ಮೆಟ್ರಿಕ್ ಮೇಳದಿಂದ ಕೇವಲ ಗಣಿತದ ಪರಿಕಲ್ಪನೆಗಳನ್ನು ಅರಿತುಕೊಳ್ಳವುದಲ್ಲದೇ ಇತರ ವಿಷಯಗಳಾದ ವಿಜ್ಞಾನ, ಸಮಾಜ ವಿಜ್ಞಾನ, ಕಲೆ ಮುಂತಾದ ವಿಷಯಗಳೊಂದಿಗೆ ಯಾವ ರೀತಿ ಸಂಬಂಧ ಹೊಂದಿದೆ ಎಂಬುದನ್ನು ತಿಳಿಸುತ್ತದೆ.

ವಿಜ್ಞಾನದೊಂದಿಗೆ ಸಹ ಸಂಬಂಧ :

ಮೆಟ್ರಿಕ್ ಮೇಳದಲ್ಲಿ ಬಳಸುವ ಗಣಿತದ ಪರಿಕಲ್ಪನೆಗಳು ವಿಜ್ಞಾನದ ಪರಿಕಲ್ಪನೆಗಳನ್ನು ಮನಪೂರ್ವಕವಾಗಿ ಅರ್ಥೈಸಲು ನೆರವಾಗುತ್ತದೆ. ಮೆಟ್ರಿಕ್ ಮೇಳದ ಪರಿಕಲ್ಪನೆಗಳು ಮತ್ತು ವಿಜ್ಞಾನ ವಿಷಯ ಒಂದುಕ್ಕೊಂದು ಅನ್ಯೋನವಾಗಿ ಸಂಬಂಧಿಸಿವೆ. ವಿಜ್ಞಾನದಲ್ಲಿ ಬರುವ ಪರಿಕಲ್ಪನೆಗಳಾದ ತತ್ವಗಳು, ಸೂತ್ರಗಳು, ಗಣಿತೀಯ ಭಾಷೆಯ ಮೂಲಕ ಪರಿಗಣಿಸಲಾಗುತ್ತವೆ. ವಿಜ್ಞಾನದ ನಿಯಮಗಳನ್ನು ನಿರೂಪಿಸಲು, ಗಣಿತದ ಪರಿಕಲ್ಪನೆಗಳನ್ನು ಅರಿತಿರಬೇಕು.

ಮೆಟ್ರಿಕ್ ಮೇಳದ ಸಹಾಯದಿಂದ ವಿಜ್ಞಾನದ ಕೌಶಲ್ಯಗಳನ್ನು ಬೆಳಸಿಕೊಳ್ಳಬಹುದಾಗಿದೆ. ನಿತ್ಯ ಜೀವನದಲ್ಲಿ ಕಂಡು ಬರುವ ವಿಜ್ಞಾನದ ಪರಿಕಲ್ಪನೆಗಳಾದ ವಾತಾವರಣ, ಹವಾಮಾನ, ಕುದಿಯುವ ಬಿಂದು, ಕರಗುವ ಬಿಂದು ಶರೀರದ ತಾಪಮಾನ, ಶರೀರದ ಅಳತೆ ಇತ್ಯಾದಿ ವಿಷಯಗಳನ್ನು ಅರಿಯಲು ಗಣಿತದ ಅವಶ್ಯಕತೆ ಅತಿ ಮುಖ್ಯವಾಗಿದ್ದು, ಮೆಟ್ರಿಕ್ ಮೇಳ ಈ ಪರಿಕಲ್ಪನೆಗಳನ್ನು ಸುಲಭವಾಗಿ ಅಥರ್ೈಸಿಕೊಳ್ಳುವ ಒಂದು ಸಾಧನವಾಗಿದೆ.

ಸಮಾಜ ವಿಜ್ಞಾನ ಮತ್ತು ಭೂಗೋಳದೊಂದಿಗೆ ಸಹಸಂಬಂಧ :

ಮೆಟ್ರಿಕ್ ಮೇಳದ ಪರಿಕಲ್ಪನೆಗಳು ಸಮಾಜ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಜೊತೆಗೆ ಸಹಸಂಬಂಧವನ್ನು ಕಲ್ಪಿಸುತ್ತವೆ. ಹಲವಾರು ಗಣಿತದ ಪರಿಕಲ್ಪನೆಗಳು ಇತಿಹಾಸದ ಬೋಧನೆಗೆ ಉಪಯುಕ್ತವಾಗಿವೆ.

ಹಿಂದಿನ ಘಟನೆಗಳನ್ನು ಆಧರಿಸಿ ವಿವಿಧ ಐತಿಹಾಸಿಕ ಘಟನೆಗಳ ದಿನಾಂಕ, ದಿನಗಳ ಲೆಕ್ಕ, ಕಾಲ ಊಹಿಸಲು ಮೆಟ್ರಿಕ್ ಮೇಳದ ಗಣಿತದ ಪರಿಕಲ್ಪನೆಗಳು ಸಹಾಯಕವಾಗಿವೆ. ರೇಖಾಗಣಿತದ ಪರಿಕಲ್ಪನೆಗಳಿಂದ ಭೂಗೋಳದಲ್ಲಿ ನಕ್ಷೆಗಳ ರೇಖಾಚಿತ್ರ, ಸ್ಥಳಗಳನ್ನು ಗುರುತಿಸುವುದು ಮತ್ತು ಅಂತರವನ್ನು ಅಂದಾಜು ಮಾಡುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದಾಗಿದೆ. ವಿವಿಧ ನಗರ, ರಾಜ್ಯ, ದೇಶಗಳ ದೂರವನ್ನು ಅಳೆಯಲು, ನಕ್ಷೆ ತಯಾರಿಸಲು, ರೇಖಾಂಶ, ಅಕ್ಷಾಂಶಗಳನ್ನು ತಿಳಿಯಲು ಅಳತೆಯ ಬಳಕೆ ಅತಿ ಮುಖ್ಯವಾಗಿದ್ದು, ಆದ್ದರಿಂದ ಮೆಟ್ರಿಕ್ನ ಪರಿಕಲ್ಪನೆಗಳನ್ನು ಭೂಗೋಳದ ಅಧ್ಯಯನದಲ್ಲಿ ಅನಿವಾರ್ಯವಾಗಿವೆ.

ಕಲೆಯೊಂದಿಗೆ ಸಂಬಂಧ :

ಕಲಾವಿದರು ತಮ್ಮ ಕಲಾಕೃತಿಗಳನ್ನು ಸುಂದರ ಮಾಡಲು ರೇಖಾಗಣಿತದ ಪರಿಕಲ್ಪನೆಗಳನ್ನು ಬಳಸುತ್ತಾರೆ. ವಿವಿಧ ಆಕಾರ, ಆಕೃತಿಗಳ ಬಳಕೆಯಿಂದ ಅದ್ಭುತವಾದ ಕಲೆಗಳನ್ನು ಸೃಷ್ಟಿಸಬಹುದಾಗಿದೆ.

ನಿತ್ಯ ಜೀವನದೊಂದಿಗೆ ಸಂಬಂಧ :

ನಿತ್ಯ ಜೀವನದಲ್ಲಿ ಪ್ರತಿ ನಿತ್ಯದ ಕೆಲಸ ಕಾರ್ಯಗಳಲ್ಲಿ ಬೇರೆಯವರೊಡನೆ ವ್ಯವಹರಿಸುವಾಗ ನಾವು ಗಣಿತದ 1 ಅಳತೆಯ ಅನಿವಾರ್ಯವನ್ನು ಕಾಣುತ್ತೇವೆ. ನಮ್ಮ ದಿನ ನಿತ್ಯದ ಜೀವನದಲ್ಲಿ ಲೆಕ್ಕ ಶಾಸ್ತ್ರ ಅತ್ಯಗತ್ಯ ಸಾಧನವಾಗಿದೆ.

ನಮ್ಮ ನಿತ್ಯ ಜೀವನದಲ್ಲಿ ಬೇಕಾಗುವ ಪ್ರಮಾಣ, ಸಮಯ, ಅಳತೆಯಲ್ಲಿ ನಿಖರತೆ, ಕೊಳ್ಳುವ/ಮಾರುವ ವ್ಯವಹಾರಗಳ ಬಗ್ಗೆ ಮೂಲಭೂತ ಜ್ಞಾನವನ್ನು ಹೊಂದಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಅವನ ದಿನ ನಿತ್ಯದ ಲೆಕ್ಕ ಯೋಜನೆಗಳಿಗೆ ಸರಳ ಗಣಿತದ ಜ್ಞಾನ ಅತಿ ಅವಶ್ಯಕ.

ಒಂದು ಸಫಲ ಜೀವನವನ್ನು ನಡೆಸಲು ಮೂಲ ಗಣಿತದ ಪರಿಕಲ್ಪನೆಗಳಾದ ಶೇಕಡಾವಾರು ಬಡ್ಡಿದರ, ರಿಯಾಯತಿ, ಅನುಪಾತ, ಅತಿ ಅಗತ್ಯವಾಗಿದ್ದು, ಈ ಎಲ್ಲ ಪರಿಕಲ್ಪನೆಗಳನ್ನು ಮೆಟ್ರಿಕ್ ಮೇಳ, ಮೂಲಕ ಸುಲಭವಾಗಿ ತಿಳಿದುಕೊಂಡು ಗಣಿತದ ಪರಿಕಲ್ಪನೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

logoblog

Thanks for reading ಮೆಟ್ರಿಕ್ ಮೇಳದ ಪರಿಕಲ್ಪನೆ

Previous
« Prev Post

No comments:

Post a Comment