Monday, 26 October 2020

ಶಿಕ್ಷಣದಲ್ಲಿ ಸುಗಮ ಸಂಗೀತ

Admin       Monday, 26 October 2020

ನಮ್ಮ ದೇಶದ ಸಂಗೀತದ ಶಾಸ್ತ್ರೀಯ ಪದ್ಧತಿಗಳು ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ. ಶಾಸ್ತ್ರೀಯ ಸಂಗೀತದ ಆವರಣದೊಳಗಿರುವ, ಶಾಸ್ತ್ರೀಯ ಸಂಗೀತದ ಚೌಕಟ್ಟಿಗೆ ಒಳಪಡದ, ಈ ಎರಡೂ ಪದ್ಧತಿಗಳಿಗೂ ಭಿನ್ನವಾಗಿ ಇಂದಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಸಂಗೀತ ಪ್ರಕಾರ ಸುಗಮ ಸಂಗೀತ. ಜನಪದ, ದಾಸರ ಪದ, ವಚನ, ಶಿಶುಗೀತೆ, ದೇಶಭಕ್ತಿಗೀತೆ, ಭಾವಗೀತೆಗಳ ಲಘು ಶಾಸ್ತ್ರೀಯ ಶೈಲಿಯ ಗಾಯನವನ್ನು ಸುಗಮಸಂಗೀತ ಎನ್ನಬಹುದು. ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಸಂಗೀತವೇ ಪ್ರಧಾನ. ಸಾಹಿತ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಸುಗಮ ಸಂಗೀತದಲ್ಲಿ ನೀಡಲಾಗುತ್ತದೆ. ಇಡೀ ಭರತಖಂಡದಲ್ಲೇ ಕಾಣಸಿಗದ ಈ ಗಾಯನ ಪದ್ಧತಿ ನಮ್ಮ ಕರ್ನಾಟಕ ರಾಜ್ಯದಲ್ಲಿದೆ, ಪ್ರಸಿದ್ಧಿ ಹೊಂದಿದೆ. ವಚನಗಳನ್ನು, ದಾಸರ ಪದಗಳನ್ನು ಶಾಸ್ತ್ರೀಯ ಸಂಗೀತಗಾರರು ಹಿಂದೆ ಹಾಡುತ್ತಿದ್ದುದುಂಟು. ಆದರೆ ಅಲ್ಲಿ ಮೊದಲೇ ಪ್ರಸ್ತಾಪಿಸಿದಂತೆ ಸಾಹಿತ್ಯಕ್ಕಿಂತ ಸಂಗೀತವೇ ಮೇಲುಗೈ ಪಡೆದುಕೊಳ್ಳುತ್ತಿತ್ತು. ಅಂತಹುದೇ ರಚನೆಗಳನ್ನು ಸಾಹಿತ್ಯಕ್ಕೆ ಒತ್ತು- ಕೊಟ್ಟು, ಅರ್ಥಕ್ಕೆ ಭಂಗಬಾರದಂತೆ ಸರಳ ಶೈಲಿಯಲ್ಲಿ ಹಾಡಿದಾಗ ಜನರ ಮನಸ್ಸಿಗೆ ಮುಟ್ಟುತ್ತದೆ. ಸಾಹಿತ್ಯದ ಸಾರಾಂಶ ಸುಲಭವಾಗಿ ಮನದಟ್ಟಾಗುತ್ತದೆ. ಇದೇ ಸುಗಮ ಸಂಗೀತ ಶೈಲಿಯ ಗೇಯ ಗುಣ.ಶಾಲಾ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಸುಗಮ ಸಂಗೀತವನ್ನು ಕಲಿಯುವ, ಹಾಡುವ, ಆಲಿಸುವ, ಪ್ರೋತ್ಸಾಹಿಸುವ ಜನರು ನೂರಾರು, ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಯುವ ಪೀಳಿಗೆಯ ಜನಾಂಗ ಅಶ್ಲೀಲ ಗೀತೆಗಳಿಂದ ದೂರವಾಗಿ, ಸುಗಮ ಸಂಗೀತದತ್ತ ಆಕರ್ಷಕರಾಗುತ್ತಿರುವುದು ಸುಸಂಸ್ಕೃತಿಗೆ ಹೆಸರುವಾಸಿಯಾದ ಕನ್ನಡನಾಡಿಗೆ ಹೆಮ್ಮೆಯ ವಿಷಯ.

ಸುಗಮ ಸಂಗೀತವನ್ನು ಒಂದು ಪಠ್ಯವನ್ನಾಗಿ ಶಾಲಾಮಕ್ಕಳಿಗೆ ಪರಿಚಯಿಸಬೇಕೆಂಬ ಬೇಡಿಕೆಯು ಸಹ ಬಹಳ ವರ್ಷಗಳಿಂದಿದೆ. ಒಂದು ವಿಷಯ ಪಠ್ಯವಾಗಬೇಕೆಂದರೆ ಅದು ವಿದ್ಯಾರ್ಥೀಗಳ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬೇಕು. ಸಮಾಜಕ್ಕೆ ಒಳಿತನ್ನುಂಟುಮಾಡುವಂತಿರಬೇಕು ಅಥವಾ ಜೀವನೋಪಾಯಕ್ಕೆ ಒದಗಿ ಬರುವಂತಿರಬೇಕು. ಇದು ಸಾಧ್ಯವೇ ? ಎಂಬುದು ಹಲವರ ಸಹಜ ಪ್ರಶ್ನೆಯಾಗಬಹುದು.ಇದಕ್ಕೆ ಹೀಗೆ ಉತ್ತರ, ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದು.ಇತ್ತೀಚಿನ ಸಂಶೋಧನೆಗಳಿಂದ ಸಂಗೀತ ಮನುಷ್ಯನ ವ್ಯಕ್ತಿತ್ತ್ವದ ಮೇಲೆ ಗಾಢ ಪರಿಣಾಮ ಬೀರುತ್ತದೆ, ಸಂಗೀತವನ್ನು ಆಸ್ವಾದಿಸುವಂತಹ ವ್ಯಕ್ತಿಗಳ ನಡವಳಿಕೆಯಲ್ಲಿ ದ್ವೇಷ, ಕ್ರೂರತನ ಮುಂತಾದವುಗಳು ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ, ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ ಎಂಬಿತ್ಯಾದಿ ಅಂಶಗಳು ದೃಢಪಟ್ಟಿವೆ. ಅಂದರೆ ವೈಜ್ಞಾನಿಕವಾಗಿ ಸಂಗೀತವು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನವಾಗಿದೆ.ಸಂಗೀತವನ್ನು ಪಠ್ಯವಾಗಿಸುವಾಗ ಶಾಸ್ತ್ರೀಯ ಸಂಗೀತವನ್ನು ಪಠ್ಯವಾಗಿ ಆರಿಸಿದರೆ ಅದು ಶಾಲಾ ಮಕ್ಕಳಿಗೆ ಕಬ್ಬಿಣದ ಕಡಲೆಯಾಗುವ ಸಾಧ್ಯತೆ ಇದೆ. ಏಕೆಂದರೆ ಶಾಸ್ತ್ರೀಯ ಸಂಗೀತ ಪದ್ಧತಿಯನ್ನು ಅಭ್ಯಸಿಸಿ, ರೂಢಿಸಿಕೊಳ್ಳಲು ಹಲವಾರು ವರ್ಷಗಳೇ ಬೇಕು. ಆದರೆ ಸುಗಮ ಸಂಗೀತದ ವಿಷಯದಲ್ಲಾದರೆ ಹಾಗಾಗದು. ಶಾಸ್ತ್ರೀಯ ಸಂಗೀತದ ಭದ್ರ ಬುನಾದಿ ಇದ್ದಲ್ಲಿ ಕೆಲವೇ ತಿಂಗಳು ಸಾಕು. ಇತರೆ ಪಠ್ಯಗಳಂತೆ ವಿದ್ಯಾಥರ್ಿಗಳು ಸುಗಮಸಂಗೀತವನ್ನು ಸರಿದೂಗಿಸಬಲ್ಲ ಸಾಮಥ್ರ್ಯ ತಾನೇ ತಾನಾಗಿ ಬಂದುಬಿಡುತ್ತದೆ.

ಸುಗಮ ಸಂಗೀತವೇ ಶಾಲಾ ಮಕ್ಕಳಿಗೆ ಪಠ್ಯವಾಗಲು ಹೆಚ್ಚು ಯೋಗ್ಯ ಎಂಬುದನ್ನು ಪುಷ್ಠೀಕರಿಸಲು ಈ ಮುಂದಿನ ಅಂಶಗಳು ಸಹಕಾರಿಯಾಗಬಲ್ಲವು. ಹಾಡೇ ಗ್ರಾಮೀಣ ಜನರ ಬದುಕು, ಪದವೇ ಹಳ್ಳಿಜನರ ಸಂಕಷ್ಟಗಳ ಸರಮಾಲೆಯನ್ನು ದೂರಮಾಡುವ ದಿವ್ಯೌಷಧ. ಶ್ರಮಭರಿತ ದುಡಿತದ ದಣಿವಾರಿಸಿಕೊಳ್ಳಲೊಂದು ಪದ, ಕಷ್ಟ ನುಂಗಿಕೊಳ್ಳಲೊಂದು ಪದ, ಸುಗ್ಗಿಗೊಂದು ಪದ, ಹಿಗ್ಗಿಗೊಂದು ಪದ. ಬೆಸುಗೆಗೊಂದು ಪದ, ಒಸಗೆಗೊಂದು ಪದ. ಕಷ್ಟಕ್ಕೊಂದು ಪದ, ಇಷ್ಟಕ್ಕೊಂದು ಪದ. ಹೀಗೆ ತಮ್ಮ ಬದುಕಿನ, ದಿನನಿತ್ಯದ ಬಹುತೇಕ ಎಲ್ಲಾ ಚಟುವಟಿಕೆಗಳನ್ನು ಬರೀ ಹಾಡುಗಳಿಂದ, ಪದಗಳಿಂದ ತುಂಬಿಕೊಂಡ ನಮ್ಮ ಜನಪದರ ಬದುಕಿನ ಸಮಗ್ರ ಚಿತ್ರಣ ಹಳ್ಳಿಗಳನ್ನು, ಹಳ್ಳಿಗರನ್ನು ನೋಡಿಯೇ ಇರದ ಪಟ್ಟಣದ ಮಕ್ಕಳಿಗೆ ಪರಿಚಯವಾಗುತ್ತದೆ. ಜನಪದ ಆಟಗಳ ಬಗ್ಗೆ ತಿಳುವಳಿಕೆಯುಂಟಾಗುತ್ತದೆ.ಸಾಹಿತ್ಯ ಕ್ಷೇತ್ರಕ್ಕೆ ವಚನಕಾರರ, ದಾಸಶ್ರೇಷ್ಠರ ಕೊಡುಗೆ ಮಹತ್ತರವಾದುದು. `ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ' `ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು', `ನಾನೇನು ಮಾಡಲಿ ಬಡವನಯ್ಯಾ' ಮುಂತಾದ ವಚನಗಳು ಸಮಾಜದಲ್ಲಿ ಕ್ರಾಂತಿಯನ್ನುಂಟುಮಾಡಿದಂತಹವು, ಮಾನವನ ಕ್ರೂರತನವನ್ನು ಮರ್ದಿಸುವಂತಹವು.

`ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು', `ನಗೆಯು ಬರುತಿದೆ', `ಆಚಾರವಿಲ್ಲದ ನಾಲಗೆ', `ಬೇವು ಬೆಲ್ಲದೊಳಿಡಲೇನು ಫಲ' ಮುಂತಾದ ದಾಸರ ಪದಗಳು ಮನುಷ್ಯ ಸಮಾಜದಲ್ಲಿ ಇರಬೇಕಾದ ರೀತಿಯನ್ನು ತಿಳಿ ಹೇಳುತ್ತದೆ, ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ.

ಶಿಶುಗೀತೆಗಳು - ನಮ್ಮ ನಾಡಿನ ಅನೇಕ ಹಿರಿಯ ಕವಿಗಳಿಂದ ಹಿಡಿದುಇತ್ತೀಚಿನಯುವಕವಿಗಳೆಲ್ಲರೂಶಿಶುಗೀತೆಗಳನ್ನುರಚಿಸಿದ್ದಾರೆ. ಕೆಲವು ಶಿಶುಗೀತೆಗಳು ಪ್ರಾಥಮಿಕಹಂತದಲ್ಲಿ ಪಠ್ಯವಾಗಿಯೂ ಇವೆ. ಇವು ಜನಪ್ರಿಯ ಗೀತೆಗಳು ಕೂಡ. `ಪಶುರ್ವೇತ್ತಿ ಶಿಶುರ್ವೇತ್ತಿ ಗಾನ ರಸಂಘಣಿ' ಎಂಬ ಮಾತು ಮಕ್ಕಳ ಮೇಲೆ ಸಂಗೀತ ಉಂಟುಮಾಡಬಹುದಾದ ಪರಿಣಾಮವನ್ನುಕುರಿತು ಹೇಳುತ್ತದೆ. ಆಧುನಿಕ ಕನ್ನಡದ ಕವಿಗಳು ಎಳೆಯ ವಯಸ್ಸಿನ ಕನಸುಕಂಗಳ ಮಕ್ಕಳಿಗೆ, ಸೊಗಸಾದ ಗೇಯ-ಲಯದೊಂದಿಗೆ ಸಾಹಿತ್ಯದ ಉಣಿಸು ನೀಡಿ ದ್ದಾರೆ. ಪಂಜೆ ಮಂಗೇಶ ರಾಯರ `ನಾಗರ ಹಾವೇ ಹಾವೊಳು ಹೂವೇ' ಜಿ.ಪಿ. ರಾಜರತ್ನಂ `ಬಣ್ಣದ ತಗಡಿನ ತುತ್ತೂರಿ', ಕುವೆಂಪು ಅವರ `ದೇವರ ಪೆಪ್ಪರಮೆಂಟೇ ನಮ್ಮ ಗಗನದೊಳಲೆಯುವ ಚಂದಿರನು' ಮುಂತಾದ ಗೀತೆಗಳು ಮಕ್ಕಳ ಮನೋ ವಿಕಾಸಗೊಳಿಸಿವೆ. ಮಗುವನ್ನು ಆನೆಯ ಮರಿಗೆ ಹೋಲಿಸಿ ಆನಿಬಂದಿತವ್ವ ಮರಿಯಾನಿ ಬಂದಿತವ್ವ' ಎಂಬ ಕಣವಿ ರಚಿಸಿದ ಗೀತೆ, `ತಾಳುವುದ ನೀ ಕಲಿಮಗು' ಎನ್ನುವ ಎನ್.ಎನ್. ಲಕ್ಷ್ಮೀನಾರಾಯಣ ಭಟ್ಟರ ಸಹನೆಯ ಪಾಠ ಹೇಳುವ ಕವಿತೆ, ತಾಯಿ ಮತ್ತು ಮಗುವಿನ ಸರಿಸಾಟಿ ಇಲ್ಲದ ವಾತ್ಸಲ್ಯದ ಕವಿತೆ (ಕುವೆಂಪು ಅವರ ರಚನೆ) `ಚಿನ್ನದ ಒಡವೆಗಳೇತಕೆ ಅಮ್ಮ? ತೊಂದರೆ ಕೊಡುವುವು ಬೇಡಮ್ಮ' ಎಂದು ಹಾಡುವ ಮಗು ಕೊನೆಯಲ್ಲಿ `ನಾ ನಿನಗೊಡವೆಯು ನೀ ನನಗೊಡವೆಯು ಬೇರೆಯ ಒಡವೆಗಳೇತಕೆ ಅಮ್ಮ' ಎಂದು ಕೇಳುತ್ತದೆ. ಜಿ.ಎಸ್. ಶಿವರುದ್ರಪ್ಪ, ಕೆ.ಎಸ್. ನರಸಿಂಹಸ್ವಾಮಿ, ವಿ. ಸೀತಾರಾಮಭಟ್ಟ, ಎಚ್.ಎಸ್. ವೆಂಕಟೇಶ್ ಮೂತರ್ಿ, ದಿನಕರ ದೇಸಾಯಿ ಮುಂತಾದ ಮಹನೀಯರುಗಳು ರಚಿಸಿದ ಶಿಶುಗೀತೆಗಳು ಪಠ್ಯವಾಗಿವೆ. ಈ ಕವಿತೆಗಳನ್ನು ರಾಗಬದ್ಧವಾಗಿ, ಸುಗಮ ಸಂಗೀತ ಶೈಲಿಯಲ್ಲಿ ಹಾಡುವುದನ್ನು ಮಕ್ಕಳಿಗೆ ಹೇಳಿಕೊಟ್ಟರೆ, ಮಕ್ಕಳ ಮನಸ್ಸಿನಲ್ಲಿ ಇವು ಅಚ್ಚಳಿಯದೇ ಉಳಿಯಬಲ್ಲವು. ಇಲ್ಲದಿದ್ದಲ್ಲಿ ಈ ಪದ್ಯಗಳನ್ನು ಕಂಠಪಾಠ ಮಾಡಿ, ಮುಂದಿನ ತರಗತಿಗಳಿಗೆ ಹೋಗುವ ಮೊದಲೇ ಮಕ್ಕಳು ಮರೆತು ಬಿಡುವ ಸಾಧ್ಯತೆಯೇ ಹೆಚ್ಚು. ಈ ಕಾರಣಕ್ಕಾಗಿಯೇ ಸುಗಮ ಸಂಗೀತ ಶಾಲಾ ಮಕ್ಕಳಿಗೆ ಹೆಚ್ಚು ಅಗತ್ಯವಾಗುತ್ತದೆ.

ಕನ್ನಡ ನಾಡು-ನುಡಿಯ ಬಗೆಗೆ ನಮ್ಮ ಕವಿಗಳು ಬರೆದ ಪದ್ಯಗಳು ಲೆಕ್ಕವಿಲ್ಲದಷ್ಟು. ಕುವೆಂಪು ಅವರ `ಜಯ್ ಭಾರತ ಜನನಿಯ ತನುಜಾತೆ' `ಬಾರಿಸು ಕನ್ನಡ ಸಿಂಡಿಮವ', `ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗು ನೀ ಕನ್ನಡವಾಗಿರು', ಹುಯಿಲಗೋಳ ನಾರಾಯಣರ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು', ಬೇಂದ್ರೆಯವರ `ಒಂದೇ ಒಂದೇ ಕನರ್ಾಟಕ ಒಂದೇ', ಚೆನ್ನವೀರ ಕಣವಿಯವರ `ವಿಶ್ವವಿನೂತನ ವಿದ್ಯಾಚೇತನ', ಕೆ.ಎಸ್. ನಿಸ್ಸಾರ್ ಅಹಮದ್ ಅವರ `ಜೋಗದ ಸಿರಿ ಬೆಳಕಿನಲ್ಲಿ', ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರ `ನಡೆದಿದೆ ಪೂಜಾರತಿ ವಿಶ್ವದೇವಿಗೆ' ಇಂತಹ ಹಲವಾರು ಕವಿತೆಗಳು ಬೆಳೆಯುವ ಮಕ್ಕಳಲ್ಲಿ ಕನ್ನಡ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಹೆಚ್ಚಿಸುತ್ತದೆ, ಸುಂದರ ಕನ್ನಡನಾಡಿನ ಚಿತ್ರಣವನ್ನು ಬಿಂಬಿಸುತ್ತದೆ. ಈ ಪುಣ್ಯ ನೆಲದಲ್ಲಿ ಹುಟ್ಟಿದ ಧನ್ಯತೆಯನ್ನುಂಟುಮಾಡುತ್ತದೆ.ಪ್ರಕೃತಿ ಗೀತೆಗಳು- ಮಲೆನಾಡಿನ ಸುಂದರ ತಾಣಗಳು, ಬೆಟ್ಟಗುಡ್ಡ ಕಣಿವೆ ಪ್ರದೇಶಗಳು, ಬಳುಕುವ ಕಾವೇರಿಯ ಸೊಬಗು, ಬೇಲೂರು ಹಳೇಬೀಡುಗಳ ಶಿಲ್ಪ ಸೌಂದರ್ಯ, ಗೊಮ್ಮಟನ ಏಕಶಿಲಾ ವೈಭವ, ಜೋಗದ ಸಿರಿ ನರ್ತನ, ನಿತ್ಯ ಹರಿದ್ವರ್ಣವನಗಳ ಸಿರಿ ಸಂಪತ್ತು, ಬಾದಾಮಿ ಐಹೊಳೆ, ಹಂಪಿಯ ಗತವೈಭವ ಇವೆಲ್ಲವನ್ನೂ ಸೆರೆಹಿಡಿದು ಭಾವನಾತ್ಮಕ ಕಾವ್ಯವಾಗಿಸಿದ ಕವಿಪುಂಗವರಿಗೆ ನಮ್ಮ ನಮನ ಸಲ್ಲಬೇಕು.ಇಂತಹ ಪದ್ಯಗಳನ್ನು ಓದುವ ಶಾಲಾ ಮಕ್ಕಳು ಶ್ರೀಮಂತ ಕರ್ನಾಟಕದ ಬಗ್ಗೆ ಹೆಮ್ಮೆಪಡುತ್ತಾರೆ. ರಾಗಬದ್ಧವಾಗಿ ಹಾಡಿ ನಲಿದು ಖುಷಿಪಡುತ್ತಾರೆ. ಇವೆಲ್ಲವು ಮಕ್ಕಳ ಮನೋವಿಕಾಸಕ್ಕೆ ನಾಂದಿಯಾಗಲು ಸಹಕಾರಿಯಾಗವೇ ?

ಕನ್ನಡದಲ್ಲೇನಿದೆ ? 

ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನವಿಲ್ಲದ ಎಷ್ಟೋ ಜನರನ್ನು ನಾವು ಕಾಣುತ್ತಿದ್ದೇವೆ. ಆಂಗ್ಲ ಮಾಧ್ಯಮದಲ್ಲಿ ಓದಿದರೆ ನಮ್ಮ ಮಕ್ಕಳು ಬುದ್ಧಿವಂತರಾಗುತ್ತಾರೆ, ಉಜ್ವಲ ಭವಿಷ್ಯ ಹೊಂದುತ್ತಾರೆ ಎಂದು ತಪ್ಪಾಗಿ ತಿಳಿದ ಪೋಷಕರೂ ನಮ್ಮ ನಡುವೆ ಇದ್ದಾರೆ.ಮಕ್ಕಳೂ ಕೂಡ ಅದನ್ನೇ ನಂಬಿದವರಂತೆ ಬೆಳೆಯುತ್ತಿದ್ದಾರೆ, ತಮ್ಮ ಎಲ್ಲಾ ಚಟುವಟಿಕೆಗಳನ್ನು ಇಂಗ್ಲಿಷ್ಮಯವಾಗಿಸಿಕೊಂಡು ಅದರಲ್ಲೇ ಬದುಕುತ್ತಿದ್ದಾರೆ.ಕನ್ನಡ ನಾಡು ನುಡಿಯ ಬಗ್ಗೆ, ಕನರ್ಾಟಕದ ವೈಭವದ ಬಗ್ಗೆ, ಸಾಹಿತ್ಯ ಶ್ರೀಮಂತಿಕೆಯ ಬಗ್ಗೆ ಇರುವ ಪದ್ಯಗಳನ್ನು ಪಠ್ಯವಾಗಿಸಿ ಅದನ್ನು ಹಾಡಿನ ಮುಖಾಂತರ ಪರಿಚಯ ಮಾಡಿಕೊಟ್ಟಾಗ, ಮಕ್ಕಳಿಗೆ ಕನ್ನಡ ಸಾಹಿತ್ಯದ ಅಪಾರ ಶ್ರೀಮಂತ ಭಂಡಾರದ ಪರಿಚಯವಾಗುತ್ತದೆ. ಕವಿಗಳ ಬಗ್ಗೆ ಹೆಮ್ಮೆ ಎನಿಸುತ್ತದೆ. ನಾಡು-ನುಡಿಯ ಕುರಿತು ಅಭಿಮಾನ ಮೂಡುತ್ತದೆ. ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಜನಪದರ ಬಗೆಗೆ ಒಲವುಂಟಾಗುತ್ತದೆ. ಇದಕ್ಕಿಂತಲೂ ಮಿಗಿಲಾಗಿ ಕನ್ನಡದ ಬಗೆಗಿನ ಕೀಳರಿಮೆ ದೂರಾಗುತ್ತದೆ. ಹೀಗಾಗುವುದು ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಮುಖ್ಯವಾದುದು.ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಶಾಲಾಮಕ್ಕಳಿಗೆ ಸುಗಮಸಂಗೀತ ಕಲಿಸುವುದು ಅತ್ಯಂತ ಸಮಂಜಸ.

ಹೆಚ್‌ ಫಲ್ಗುಣ


logoblog

Thanks for reading ಶಿಕ್ಷಣದಲ್ಲಿ ಸುಗಮ ಸಂಗೀತ

Previous
« Prev Post

No comments:

Post a Comment