ಮುಖ್ಯಾಂಶಗಳು:
• ಚಿಪ್ಕೋ ಚಳುವಳಿ ನಡೆದ ರಾಜ್ಯ ಉತ್ತರ ಪ್ರದೇಶ.
• ‘ನರ್ಮದಾ ಅಂದೋಲನ’ದ ನೇತೃತ್ವ ವಹಿಸಿದವರು ಪರಿಸರ ಪ್ರೇಮಿ ಮೇದಾ ಪಟ್ಕರ್ & ಬಾಬಾ ಆಮ್ಟೆ.
• ಡಾ. ಶಿವರಾಮ ಕಾರಂತರು ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವದನ್ನು ವಿರೋಧಿಸಿದರು.
• ದೊಡ್ಡ ಸಂಖ್ಯೆಯ ಜನರ ಆಕಸ್ಮಿಕವಾದ ಹಾಗೂ ಯೋಜನಾಬದ್ಧವಲ್ಲದ ವರ್ತನೆಗೆ ಸಾಮೂಹಿಕ ವರ್ತ£ É ಎನ್ನಬಹುದು.
• ಚಿಪ್ಕೋ ಚಳುವಳಿಯು 1973 ರಲ್ಲಿ ಶ್ರೀ ಸುಂದರಲಾಲ ಬಹುಗುಣ ಹಾಗೂ ಶ್ರೀ ಚಂಡಿ ಪ್ರಸಾದ ಭಟ್ಟರವರ ನೇತೃತ್ವದಲ್ಲಿ ನಡೆಯಿತು.
• ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮದ ರೈತರು 1983 ರಲ್ಲಿ ಅಪ್ಪಿಕೋ ಚಳುವಳಿಯನ್ನು ನಡೆಸಿದರು.
• ಸ್ತ್ರೀಯರನ್ನು ಸಮಾಜದಲ್ಲಿ ಸಬಲರನ್ನಾಗಿ ಬಲಪಡಿಸುವಲ್ಲಿ ಸ್ತ್ರೀಯರ ಸ್ವಸಹಾಯ ಗುಂಪುಗಳು (ಸ್ತ್ರೀಶಕ್ತಿ ಸಂಘಗಳು ) ಪ್ರಮುಖ ಪಾತ್ರ ವಹಿಸುತ್ತವೆ.
• ಚಿಪ್ಕೋ ಚಳುವಳಿಯು ಮೊದಲು ಪ್ರಾರಂಭವಾದದ್ದು ಉತ್ತರ ಪ್ರದೇಶದ ತೆಹ್ರಿ-ಘರ್ವಾಲ್ ಜಿಲ್ಲೆಯಲ್ಲಿ.
• ಚಿಪ್ಕೋ ಚಳುವಳಿಯ ನೇತಾರ - ಸುಂದರಲಾಲ ಬಹುಗುಣ
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಮೂಹ ವರ್ತನೆ ಎಂದರೇನು?
ಸಂಘಜೀವಿಯಾದ ಮಾನವನು ಸಮೂಹದ ಮಧ್ಯದಲ್ಲಿರುವಾಗ ತಾನು ಒಬ್ಬಂಟಿಗನಾಗಿದ್ದಾಗ ವರ್ತಿಸುವ ರೀತಿಗಿಂತಲೂ ಭಿನ್ನ ರೀತಿಯಲ್ಲಿ ವರ್ತಿಸುತ್ತಾನೆ. ಸಮೂಹದಲ್ಲಿ ಇರುವಾಗ ಮಾಡುವ ಆತನ ವರ್ತನೆಯನ್ನು ಸಮೂಹ ವರ್ತನೆ ಎಂದು ಕರೆಯಲಾಗುತ್ತದೆ.
2. ಸ್ವ-ಸಹಾಯ ಸಮೂಹ ಎಂದರೇನು?
ಮಹಿಳೆಯರ ಸ್ವ-ಸಹಾಯ ಸಮೂಹ ಎಂಬುದು ಸ್ವಪ್ರಜ್ಞೆ, ಸ್ವಪ್ರೇರಣೆ ಹಾಗೂ ಪರಸ್ಪರ ನಂಬಿಕೆಯೊಂದಿಗೆ ತಮ್ಮ ಆರ್ಥಿಕ, ಸಾಮಾಜಿಕ ಅಗತ್ಯತೆಗಳನ್ನು ತಾವೇ ತಮ್ಮ ಸ್ವಂತ ಪ್ರಯತ್ನ ಮತ್ತು ಸಹಕಾರದಿಂದ ಪೂರೈಸಿಕೊಳ್ಳುವ ಉದ್ದೇಶದಿಂದ ರೂಪಿತವಾದ 10 ರಿಂದ 20 ಜನ ಸ್ತ್ರೀಯರನ್ನೊಳಗೊಂಡ ಒಂದು ಸ್ಥಳೀಯ ಸಮೂಹವಾಗಿರುತ್ತದೆ.
3. ಸಮೂಹ ವರ್ತನೆಯ ಮಾದರಿಗಳಾವವು?
ಸಮೂಹ ವರ್ತನೆಯಲ್ಲಿ ಜನಮಂದೆ, ದೊಂಬಿ, ಪೊಳ್ಳುಸುದ್ದಿಗಳ ಪ್ರಚಾರ, ಸಾರ್ವಜನಿಕ ಅಭಿಪ್ರಾಯ, ಕ್ರಾಂತಿ ಹಾಗೂ ಸಾಮಾಜಿಕ ಅಂದೋಲಗಳನ್ನು ಗುರುತಿಸಬಹುದಾಗಿದೆ.
4. ಜನಮಂದೆ ಎಂದರೇನು? ಉದಾಹರಣೆ ಕೊಡಿ.
ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯೇ ಜನಮಂದೆಯಾಗಿದೆ. ಉದಾ : ರಸ್ತೆ ಅಪಘಾತ ವಿಕ್ಷಿಸಲು ಸೇರಿರುವ ಜನಸಮೂಹ.
5. ಜನಮಂದೆಯ ಸ್ವರೂಪವನ್ನು ತಿಳಿಸಿ.
ಜನಮಂದೆಯು ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ. ಇದರಲ್ಲಿ ಜನರು ಯಾವುದೋ ಒಂದು ನಿರ್ಧಿಷ್ಟ ಸ್ಥಳದಲ್ಲಿ ಭೌತಿಕವಾಗಿ ಒಟ್ಟಾಗಿ ಸೇರಿರುತ್ತಾರೆ. ಜನಮಂದೆಯ ಸದಸ್ಯರು ಪರಸ್ಪರ ಅಭಿಪ್ರಾಯ, ಭಾವನೆಗಳು ಮತ್ತು ಕ್ರಿಯೆಗಳ ಪ್ರಭಾವಕ್ಕೆ ಬಹುಬೇಗ ಒಳಗಾಗುತ್ತಾರೆ.
6. ಪರಿಸರ ಮಾಲಿನ್ಯದ ಅರ್ಥ ತಿಳಿಸಿ.
ಭೂಮಿ, ಗಾಳಿ, ನೀರು ಮತ್ತು ಜೀವಮಂಡಲವನ್ನೊಳಗೊಂಡ ನಮ್ಮ ಸುತ್ತ ಮುತ್ತಲಿನ ಪರಿಸರವು ವಿಷಕಾರಕ ಹಾಗೂ ರಾಸಾಯನಿಕ ಅಂಶಗಳಿಂದ ಕಲುಷಿತವಾಗುವದನ್ನು ‘ಪರಿಸರ
ಮಾಲಿನ್ಯ’ ಎನ್ನಬಹುದು.
7. ದೊಂಬಿ ಎಂದರೇನು? ದೊಂಬಿಯ ಸ್ವರೂಪವನ್ನು ತಿಳಿಸಿ.
ತೀರಾ ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆಯನ್ನು ದೊಂಬಿ ಎನ್ನುತ್ತಾರೆ. ದೊಂಬಿಯಲ್ಲಿ ಭಾಗವಹಿಸಿರುವವರು ಎದುರಿಗೆ ಸಿಕ್ಕದ್ದೆಲ್ಲವನ್ನು ಹಾಳುಮಾಡುತ್ತಾ ಸಾಗುವರು. ಗೊಂದಲವನ್ನು ಸೃಷ್ಟಿ ಮಾಡುವುದೇ ದೊಂಬಿಯ ಉದ್ದೇಶವಾಗಿರುತ್ತದೆ. ದೊಂಬಿಗಳು ಅಪಾರ ಹಾನಿಯನ್ನು ಉಂಟು ಮಾಡುತ್ತವೆ.
8. ಮಹಿಳಾ ಸ್ವ - ಸಹಾಯ ಸಮೂಹಗಳ ಪ್ರಾಮುಖ್ಯತೆಯನ್ನು ವಿವರಿಸಿ.
• ಮಹಿಳಾ ಸ್ವ - ಸಹಾಯ ಗುಂಪುಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಸಫಲವಾಗಿವೆ.
• ಸ್ತ್ರೀಯರು ತಮ್ಮ ದುಡಿಮೆಯ ಸ್ವಲ್ಪ ಹಣವನ್ನು ಉಳಿಸುತ್ತಾರೆ. ಇದರಿಂದ ಹಣ ಸಂಗ್ರಹವಾಗಿ ಮಹಿಳೆಯರ ಕೌಟಂಬಿಕ ಜೀವನಕ್ಕೆ ನೆರವಾಗುತ್ತದೆ.
• ಸ್ತ್ರೀಯರ ಸಾಮಾಜಿಕ ಶಕ್ತಿಯನ್ನು ಬಲಪಡಿಸುವಲ್ಲಿ ಸ್ವಸಹಾಯ ಸಮೂಹಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.
• ಇವು ಸ್ತ್ರೀಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸುತ್ತವೆ.
• ಸ್ತ್ರೀಯರ ಆರ್ಥಿಕ & ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.
• ಸ್ತ್ರೀಯರು ಸ್ವ-ಸಹಾಯ ಗುಂಪುಗಳ ಮೂಲಕ ಸರಕಾರದ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಸಹಕಾರಿಯಾಗಿದೆ.
9. ಅಪ್ಪಿಕೋ ಚಳುವಳಿಯ ಉದ್ದೇಶ ಏನಾಗಿತ್ತು?
ಮರಗಳ ಕಳ್ಳಸಾಗಾಣಿಗೆ ತಡೆಗಟ್ಟುವದು, ಗಿಡಮರಗಳನ್ನು ಬೆಳೆಸುವದು ಹಾಗೂ ಪರಿಸರ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಅಪ್ಪಿಕೋ ಚಳುವಳಿ ಉದ್ದೇಶವಾಗಿತ್ತು.
10. ಮೌನ ಕಣಿವೆ ಆಂದೋಲನ ಎಂದರೇನು?
ಕೇರಳದ ಪಾಲ್ಘಾಟ್ ತಾಲೂಕಿನ ಮೌನ ಕಣಿವೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಆಣೆಕಟ್ಟಿನ ನಿರ್ಮಾಣದಿಂದ ಪರಿಸರ ನಾಶದ ಜೊತೆಗೆ ಅನೇಕ ಜೀವ ಪ್ರಭೇದಗಳು ಜೀವಿಸಲು ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಅದನ್ನು ತಡೆಗಟ್ಟಲು ನಡೆದ ಚಳುವಳಿಯಾಗಿದೆ.
11. ನರ್ಮದಾ ಆಂದೋಲನಕ್ಕೆ ಕಾರಣಗಳೇನು?
ಗುಜರಾತ ರಾಜ್ಯದ ಸರ್ದಾರ್ ಸರೋವರ ಯೋಜನೆಯಡಿಯಲ್ಲಿ ನರ್ಮದಾ ನದಿಗೆ ಕಟ್ಟಲಾದ ಆಣೆಕಟ್ಟು ನಿರ್ಮಾಣದಿಂದ ಅರಣ್ಯ ನಾಶ, ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ. ಎಂಬ ಉದ್ದೇಶದಿಂದ ಪರಿಸರ ಪ್ರೇಮಿ ಮೇಧಾ ಪಾಟ್ಕರ್ ಮತ್ತು ಬಾಬಾ ಆಮ್ಟೆಯವರ ನೇತೃತ್ವದಲ್ಲಿ ನರ್ಮದಾ ಬಚಾವೋ ಆಂದೋಲನ ನಡೆಯಿತು.
12. ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತವಾಗಲು ಕಾರಣಗಳೇನು?
ಕೈಗಾ ಅಣುಶಕ್ತಿ ಸ್ಥಾವರ ಸ್ಥಾಪನೆಯಿಂದ ಅರಣ್ಯ ನಾಶ, ಅಣುವಿಕಿರಣದಿಂದ ಪರಿಸರ ಮಾಲಿನ್ಯ ಮುಂತಾದ ದುಷ್ಪಾರಿಣಾಮಗಳಿಂದ ಜೀವ ಪ್ರಭೇದಗಳ ಮೇಲೆ ಹಾನಿಕಾರಕ ಪರಿಣಾಮಗಳುಂಟಾಗುತ್ತವೆ ಎಂಬ ಉದ್ದೇಶಗಳಿಂದ ಕೈಗಾ ಆಣುಶಕ್ತಿ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತವಾಯಿತು.
13. ಪರಿಸರ ಸಂರಕ್ಷಣೆಗಾಗಿ ನಡೆಸಿರುವ ಕೆಲವು ಸಾಮೂಹಿಕ ಪ್ರತಿಭಟನೆಗಳನ್ನು ಪಟ್ಟಿ ಮಾಡಿ.
1. ಚಿಪ್ಕೋ ಚಳುವಳಿ, 2. ಅಪ್ಪಿಕೋ ಚಳುವಳಿ, 3. ನರ್ಮದಾ ಅಂದೋಲನ 4. ಮೌನ ಕಣಿವೆ ಅಂದೋಲನ, 5. ಕೈಗಾ ವಿರೋಧಿ ಚಳುವಳಿ.
14. ಪರಿಸರ ಮಾಲಿನ್ಯವು ಗಂಭಿರ ಸಮಸ್ಯೆಯಾಗಿದೆ ಏಕೆ?
• ಜನರು ತಮ್ಮ ಸುಖಭೋಗದ ಜೀವನಕ್ಕಾಗಿ ಪರಿಸರವನ್ನು ದುರ್ಬಳಕೆ ಮಾಡುತ್ತಿದ್ದಾರೆ.
• ಜಗತ್ತಿನ ಹಲವಾರು ದೇಶಗಳು ಹೆಚ್ಚುತ್ತಿರುವ ಜನಸಂಖ್ಯೆಯಿಂದುಂಟಾಗುವ ಸಮಸ್ಯೆಗಳನ್ನು
• ಎದುರಿಸಲು ಪರಿಸರದ ಮೇಲೆ ಒತ್ತಡ ತರುತ್ತೀವೆ.
• ಅನಿಯಂತ್ರಿತವಾಗಿ ಸಾಗುತ್ತಿರುವ ನಗರಗಳ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ, ತಾಂತ್ರಿಕ
• ಪ್ರಗತಿ, ಸಾರಿಗೆ ವ್ಯವಸ್ಥೆಯ ಬೆಳವಣಿಗೆ ಮುಂತಾದವುಗಳಿಂದ ಅರಣ್ಯಗಳ ನಾಶ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತದೆ.
• ಇದರಿಂದಾಗಿ ಪರಿಸರ ಮಾಲಿನ್ಯವು ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
15. ಚಳುವಳಿ ಎಂದರೇನು?
ಸಮೂಹ ವರ್ತನೆಯು ಯೋಜನಾಬದ್ಧವಾಗಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದು, ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಿದರೆ ಅದನ್ನು ಚಳುವಳಿ ಎನ್ನಬಹುದು.
16. ಪರಿಸರ ಮಾಲಿನ್ಯದಿಂದುಂಟಾಗುವ ದುಷ್ಪರಿಣಾಮಗಳೇನು?
• ಅರಣ್ಯಗಳು ನಾಶವಾಗುತ್ತವೆ.
• ಜೀವಸಂಕುಲಗಳು ನಾಶವಾಗುತ್ತವೆ.
• ಅಣುವಿಕಿರಣದಿಂದ ಪರಿಸರ ಮಾಲಿನ್ಯವಾಗುತ್ತದೆ.
• ಜೀವ ಪ್ರಭೇದಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
• ವಿಕಾರಕ ಹಾಗೂ ರಾಸಾಯನಿಕ ಅಂಶಗಳಿಂದ ಪರಿಸರ ಕಲುಷಿತಗೊಳ್ಳುತ್ತದೆ.
No comments:
Post a Comment