9ನೇ ತರಗತಿ ಭೂಗೋಳಶಾಸ್ತ್ರ
ಅಧ್ಯಾಯ 7 ಸಾರಿಗೆ
ಸ್ಥಳದಿಂದ ಸ್ಥಳಕ್ಕೆ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಿಸುವ ಮಾಧ್ಯಮವೇ ಸಾರಿಗೆಯಾಗಿದೆ.ಕೃಷಿ, ಕೈಗಾರಿಕೆ, ವ್ಯಾಪಾರದ ಪ್ರಗತಿಯಲ್ಲಿ ಸಾರಿಗೆ ಸಂಪರ್ಕಗಳು ಜೀವನಾಡಿಯಿದ್ದಂತೆ.ಕರ್ನಾಟಕವು ಅನೇಕ ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದ ರಾಜ್ಯ. ಇಲ್ಲ ಖನಿಜ ಸಂಪನ್ಮೂಲಗಳು, ವಾಣಿಜ್ಯ ಬೆಳೆಗಳು, ಅರಣ್ಯ ವಸ್ತುಗಳು, ಶಕ್ತಿ ಸಾಧನಗಳು ದೊರೆಯುವುವು. ಇವುಗಳ ಸಮರ್ಥ ಬಳಕೆಯಿಂದ ಆರ್ಥಿಕಾಭಿವೃದ್ಧಿಯನ್ನು ಸಾಧಿಸಲು ಸುವ್ಯವಸ್ಥಿತವಾದ ಸಾರಿಗೆ ಸೌಲಭ್ಯವು ಅಗತ್ಯ. ಕರ್ನಾಟಕವು ಕೃಷಿ ಪ್ರಧಾನ ರಾಜ್ಯ. ಆಹಾರ ಧಾನ್ಯ ಹಾಗೂ ಇತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ಗೊಬ್ಬರ, ಕೃಷಿ ಉಪಕರಣಗಳನ್ನು ಕೃಷಿ ವಲಯಗಳಿಗೆ ಸಾಗಿಸಲು ಸಾರಿಗೆಯು ಅವಶ್ಯಕ.ಗಣಿಯಿಂದ ಖನಿಜಗಳನ್ನು ಕೈಗಾರಿಕೆಗಳಿಗೆ ಸಾಗಿಸಲು ಮತ್ತು ಕೈಗಾರಿಕೆಗಳಿಂದ ಸಿದ್ಧವಸ್ತುಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾರಿಗೆಯು ಅವಶ್ಯಕ.ಪ್ರಯಾಣಿಕರನ್ನು ಸಾಗಿಸಲು, ಇನ್ನೂ ಹಲವಾರು ಉದ್ದೇಶಗಳಿಗೆ ವಿವಿಧ ರೀತಿಯ ಸಾರಿಗೆ ಸೌಲಭ್ಯವು ಅವಶ್ಯಕ.ಕರ್ನಾಟಕವು ರಸ್ತೆ, ರೈಲು, ಜಲಸಾರಿಗೆ ಮತ್ತು ವಾಯುಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ.
ರಸ್ತೆ ಸಾರಿಗೆ :
ಪ್ರಾಮುಖ್ಯತೆ :ಹೆಚ್ಚಾಗಿ ಜನರು ಹಳ್ಳಿಗಾಡಿನಲ್ಲೇ ವಾಸ ಮಾಡುವುದರಿಂದ ಪ್ರತಿಯೊಂದು ಹಳ್ಳಿ-ಪಟ್ಟಣ ಹಾಗೂ ಇತರ ಜನವಸತಿಗಳನ್ನು ಸಂಪರ್ಕಿಸುವುದರಲ್ಲಿ ರಸ್ತೆ ಸಾರಿಗೆಯ ಪಾತ್ರ ಮಹತ್ವದ್ದಾಗಿದೆ.ರಸ್ತೆಗಳನ್ನು ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದು.ಇದರಿಂದ ಪ್ರಯಾಣಿಕರು ಸರಕುಗಳನ್ನು ರಾಜ್ಯದ ಮೂಲೆ ಮೂಲೆಗೂ ಸಾಗಿಸಬಹುದು.ರಸ್ತೆಗಳು ಅಭಿವೃದ್ಧಿಯು ರಾಜ್ಯದ ಕೃಷಿ, ಕೈಗಾರಿಕೆ, ಗಣಿಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಪ್ರಗತಿಯನ್ನು ನಿರ್ಧರಿಸುತ್ತದೆ.
ಕರ್ನಾಟಕದಲ್ಲಿ ರಸ್ತೆ ಸಾರಿಗೆಯ ಬೆಳವಣಿಗೆ
:
ಕರ್ನಾಟಕದಲ್ಲಿ ಪ್ರಾಚೀನ
ಕಾಲದಿಂದಲೂ ರಸ್ತೆ ಸಾರಿಗೆಯು
ರೂಢಿಯಲ್ಲಿದೆ.ರಾಜ ಮಹಾರಾಜರುಗಳು
ತಮ್ಮ ಸೈನಿಕರ ಮತ್ತು
ಆಡಳಿತ ನಿರ್ವಹಣೆಗಾಗಿ ರಸ್ತೆಗಳನ್ನು
ನಿರ್ಮಾಣ ಮಾಡುತ್ತಿದ್ದರು.ಪ್ರಮುಖ
ರಸ್ತೆ ಮಾರ್ಗಗಳಲ್ಲಿ ಅರವಟಿಗೆ,
ತಂಗುದಾಣ, ತೋಪುಗಳು ಹಾಗೂ
ಛತ್ರಗಳಿದ್ದವು.ಕರಾವಳಿ ಮತ್ತು
ಒಳನಾಡನ್ನು ಸಂಪರ್ಕಿಸುವ ರಸ್ತೆಗಳನ್ನು
ನಿರ್ಮಾಣ ಮಾಡಿದ್ದರು.
ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟಾಗಿ ರಸ್ತೆಗಳು ನಿರ್ಮಾಣವಾಗಿರುವುದಿಲ್ಲ. ಹಳೆ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿದ್ದವು. ಸ್ವಾತಂತ್ರ್ಯಾನಂತರ ವಿಶಾಲ ಮೈಸೂರು ರಾಜ್ಯ ನಿರ್ಮಾಣವಾದ ಮೇಲೆ 1961 ರಲ್ಲಿ ಒಟ್ಟು 43,182 ಕಿ.ಮೀ.ಗಳಷ್ಟು ಉದ್ದದ ರಸ್ತೆಗಳಿದ್ದವು. ಪ್ರಸ್ತುತ ಒಟ್ಟು ರಸ್ತೆಗಳ ಉದ್ದ 2,31,062 ಕಿ.ಮೀ.ಗಳು. ಇವುಗಳಲ್ಲಿ ಶೇ.35.70 ಭಾಗದಷ್ಟು ಪಕ್ಕಾ ರಸ್ತೆಗಳು ಮತ್ತು ಶೇ.64.30 ಭಾಗದಷ್ಟು ಕಚ್ಚಾ ರಸ್ತೆಗಳಿವೆ.ಇತ್ತೀಚೆಗೆ ರಸ್ತೆಗಳ ಗುಣಮಟ್ಟದಲ್ಲಿಯೂ ಪ್ರಗತಿಯಾಗಿರುವುದು ಕಂಡುಬರುತ್ತದೆ.
ಕರ್ನಾಟಕದ ರಸ್ತೆಗಳ ವಿಧಗಳು ಕರ್ನಾಟಕದ ರಸ್ತೆಗಳನ್ನು
ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ
ಅವುಗಳೆಂದರೆ
1) ರಾಷ್ಟ್ರೀಯ ಹೆದ್ದಾರಿಗಳು. 2) ರಾಜ್ಯ ಹೆದ್ದಾರಿಗಳು, 3) ಜಿಲ್ಲಾ ರಸ್ತೆಗಳು 4) ಗ್ರಾಮೀಣ ರಸ್ತೆಗಳು
1)
ರಾಷ್ಟ್ರೀಯ
ಹೆದ್ದಾರಿಗಳು
ಪ್ರಮುಖ ನಗರಗಳು,
ರಾಜ್ಯಗಳ ರಾಜಧಾನಿಗಳು, ಹಾಗೂ
ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳಿಗೆ
‘ರಾಷ್ಟ್ರೀಯ ಹೆದ್ದಾರಿ’ಗಳೆನ್ನುವರು.ಇವು
ಗುಣಮಟ್ಟದ ಮತ್ತು ಅಗಲವಾದ
ರಸ್ತೆಗಳಾಗಿದ್ದು, ದ್ವಿಮುಖ, ನಾಲ್ಕು
ಪಥ ಮತ್ತು ಆರು
ಪಥದ ರಸ್ತೆಗಳನ್ನು ಹೊಂದಿರುತ್ತವೆ.ಇವು
ಕೇಂದ್ರ ಸರಕಾರದ ಅಧೀನದಲ್ಲಿದ್ದು,
ಇವುಗಳ ನಿರ್ವಹಣೆ ಕಾರ್ಯವು
‘ರಾಷ್ಟ್ರೀಯ ಹೆದ್ದಾರಿ
ಪ್ರಾಧಿಕಾರ’ (NHAI) ಕ್ಕೆ ಸೇರಿದೆ.
ಕರ್ನಾಟಕದಲ್ಲಿ ಪ್ರಸ್ತುತ
14 ರಾಷ್ಟ್ರೀಯ ಹೆದ್ದಾರಿಗಳಿವೆ.ಇವುಗಳ
ಒಟ್ಟು ಉದ್ದ 4491
ಕಿ.ಮೀ.ಗಳು.ಉತ್ತರ
ಕನ್ನಡ, ಬಿಜಾಪುರ, ಬೆಳಗಾವಿ,
ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ,
ತುಮಕೂರು, ದಕ್ಷಿಣ ಕನ್ನಡ
ಹಾಗೂ ಬಳ್ಳಾರಿ ಜಿಲ್ಲೆಗಳು
ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು
ಹೊಂದಿದೆ.ಆದರೆ ರಾಯಚೂರು
ಮತ್ತು ಕೊಡಗು ಜಿಲ್ಲೆಗಳಲ್ಲಿ
ರಾಷ್ಟ್ರೀಯ ಹೆದ್ದಾರಿಗಳಿಲ್ಲ.
ರಾಷ್ಟ್ರೀಯ ಹೆದ್ದಾರಿ NH-4 ಮತ್ತು NH-7 ಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ‘ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ’ ಹಾಗೂ ‘ಕಾರಿಡಾರ ಯೋಜನೆ’ಗಳಿಗೆ ಸೇರಿವೆ. ಅವು ಆರು ಪಥಗಳನ್ನು ಹೊಂದಿವೆ.ರಾಜ್ಯದಲ್ಲಿ ಹಾದು ಹೋಗುವ ಇತರ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೆಂದರೆ NH-13, NH-17, NH-48, NH-206, NH-209 ಮತ್ತು NH-212.ಪ್ರಮುಖವಾದವುಗಳು.
2)
ರಾಜ್ಯ
ಹೆದ್ದಾರಿಗಳು :
ರಾಜದಾನಿ ಬೆಂಗಳೂರಿನಿಂದ
ಜಿಲ್ಲಾ ಕೇಂದ್ರ, ಪ್ರಮುಖ
ನಗರಗಳು ಹಾಗೂ ರಾಷ್ಟ್ರೀಯ
ಹೆದ್ದಾರಿಗಳೊಡನೆ ಸಂಪರ್ಕಿಸುವ ರಸ್ತೆಗಳಿಗೆ
‘ರಾಜ್ಯ ಹೆದ್ದಾರಿ’
ಎಂದು ಕರೆಯುವರು.ಇವುಗಳ
ನಿರ್ಮಾಣ-ನಿರ್ವಹಣೆ ರಾಜ್ಯ
ಸರಕಾರಗಳಿಗೆ ಸೇರಿದೆ.ರಾಜ್ಯದಲ್ಲಿ
20,905 ಕಿ.ಮೀ.ಉದ್ದದ
ರಾಜ್ಯ ಹೆದ್ದಾರಿಗಳಿವೆ.ಬೆಳಗಾವಿ
ಜಿಲ್ಲೆ ಅತಿ ಉದ್ದದ
ರಾಜ್ಯ ಹೆದ್ದಾರಿ ಹೊಂದಿರುವ
ಜಿಲ್ಲೆಯಾಗಿದೆ.ಬೆಂಗಳೂರು ಅತಿ
ಕಡಿಮೆ ಉದ್ದದ ರಾಜ್ಯ
ಹೆದ್ದಾರಿಯುಳ್ಳ ಜಿಲ್ಲೆಯಾಗಿದೆ.ಏಕೆಂದರೆ
ಇಲ್ಲಿ ನಗರ ರಸ್ತೆಗಳು
ಹೆಚ್ಚು.
3)
ಜಿಲ್ಲಾ
ರಸ್ತೆಗಳು :
ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕು ಕೇಂದ್ರಗಳಿಗೆ, ಪ್ರಮುಖ ಪಟ್ಟಣ, ಗ್ರಾಮಗಳು ರೈಲು ಮಾರ್ಗ ಹಾಗೂ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜಿಲ್ಲಾ ರಸ್ತೆಗಳೆನ್ನುವರು.ಇವುಗಳ ನಿರ್ಮಾಣ ಅಭಿವೃದ್ಧಿ ಮೇಲ್ವಿಚಾರಣೆಯು ‘ಜಿಲ್ಲಾ ಪಂಚಾಯತ್’ಗೆ ಸೇರಿರುತ್ತದೆ.ರಾಜ್ಯದಲ್ಲಿ ಒಟ್ಟು 47,836 ಕಿ.ಮೀ.ಉದ್ದದ ಜಿಲ್ಲಾ ರಸ್ತೆಗಳಿವೆ.ತುಮಕೂರು ಜಿಲ್ಲೆ ಹೆಚ್ಚು ಜಿಲ್ಲಾ ರಸ್ತೆಗಳನ್ನೊಳಗೊಂಡಿದೆ.ರಾಯಚೂರು ಜಿಲ್ಲೆ ಕಡಿಮೆ ಜಿಲ್ಲಾ ರಸ್ತೆಗಳನ್ನೊಳಗೊಂಡಿದೆ.
4)
ಗ್ರಾಮೀಣ ರಸ್ತೆಗಳು :
ತಾಲ್ಲೂಕು ಕೇಂದ್ರದಿಂದ
ಪ್ರತಿಯೊಂದು ಗ್ರಾಮಗಳಿಗೂ, ಎಲ್ಲಾ
ಜಿಲ್ಲಾ ರಸ್ತೆಗಳಿಗೆ ಸಂಪರ್ಕ
ಕಲ್ಪಿಸುವ ರಸ್ತೆಗಳೇ ‘ಗ್ರಾಮೀಣ
ರಸ್ತೆ’ಗಳು.ಇವುಗಳ
ನಿರ್ಮಾಣ ನಿರ್ವಹಣೆ ತಾಲ್ಲೂಕು
ಪಂಚಾಯತಿ ಮತ್ತು ಗ್ರಾಮ
ಪಂಚಾಯತಿ ಆಡಳಿತಕ್ಕೆ ಸೇರಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು
1,47,212 ಕಿ.ಮೀ.
ಉದ್ದದ ಗ್ರಾಮೀಣ ರಸ್ತೆಗಳಿವೆ.
ಮೇಲ್ಕಂಡ ವರ್ಗದ ರಸ್ತೆಗಳಲ್ಲದೆ, ವಿವಿಧ ಉದ್ದೇಶ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗಳ ಅಧೀನದ ರಸ್ತೆಗಳಿವೆ. ಉದಾ : ಲೋಕೋಪಯೋಗಿ ರಸ್ತೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಪುರಸಭೆ – ನಗರಪಾಲಿಕೆ ರಸ್ತೆಗಳು.
ರೈಲುಸಾರಿಗೆ
ಕರ್ನಾಟಕದಲ್ಲಿ ರಸ್ತೆ
ಸಾರಿಗೆಯ ನಂತರ ರೈಲು
ಸಾರಿಗೆಯು ಪ್ರಮುಖವಾದುದು.ಕಡಿಮೆ
ದರದಲ್ಲಿ ದೂರದ ಸ್ಥಳಗಳಿಗೆ
ಪ್ರಯಾಣಿಸಲು ಹಾಗೂ ಸರಕುಗಳನ್ನು
ಸಾಗಿಸಲು ರೈಲು ಸಾರಿಗೆಯು
ಮಹತ್ವ ಪಡೆದಿದೆ.
ಕರ್ನಾಟಕದಲ್ಲಿ ಮೊಟ್ಟಮೊದಲ
ರೈಲು ಸಂಚಾರ ಆರಂಭವಾಗಿದ್ದು
1864ರಲ್ಲಿ.ಇದನ್ನು
ಬೆಂಗಳೂರು ಮತ್ತು ಮದರಾಸು
ನಗರಗಳ ಮಧ್ಯೆ ‘ಮದರಾಸು
ರೈಲ್ವೆ ಕಂಪನಿ’ಯು
ನಿರ್ಮಿಸಿತು.1956ರ ವೇಳೆಗೆ
ಒಟ್ಟು 2595 ಕಿ.ಮೀ.ಗಳಿದ್ದು
ಅದು ದಕ್ಷಿಣ ರೈಲ್ವೆ
ವಲಯಕ್ಕೆ ಸೇರಿತ್ತು.ಈಗ
ನೈಋತ್ಯ ರೈಲ್ವೆ ವಲಯವು
ಅಸ್ತಿತ್ವಕ್ಕೆ ಬಂದಿದೆ.ಅದರ
ಆಡಳಿತ ಕೇಂದ್ರ ಹುಬ್ಬಳ್ಳಿಯಲ್ಲಿದೆ.ಕರ್ನಾಟಕದಲ್ಲಿ
ಇಂದು 3244 ಕಿ.ಮೀ.ಉದ್ದು
ರೈಲು ಮಾರ್ಗಗಳಿವೆ.
ಕರ್ನಾಟಕದ ಎಲ್ಲಾ
ಜಿಲ್ಲೆಗಳಲ್ಲೂ ರೈಲು ಮಾರ್ಗಗಳು
ಸಮನಾಗಿ ಹಂಚಿಕೆಯಾಗಿಲ್ಲ ಬೆಂಗಳೂರು, ಬಳ್ಳಾರಿ,
ಬೆಳಗಾವಿ, ಹಾಸನ, ಉತ್ತರ
ಕನ್ನಡ, ಚಿತ್ರದುರ್ಗ, ಉಡುಪಿ,
ರಾಮನಗರ, ದಕ್ಷಿಣ ಕನ್ನಡ
ಜಿಲ್ಲೆಗಳು ಸರಾಸರಿ 150 – 200 ಕಿ.ಮೀ.
ಉದ್ದದ ರೈಲು ಮಾರ್ಗಗಳನ್ನು
ಹೊಂದಿರುತ್ತವೆ.ಕೊಡಗು ಜಿಲ್ಲೆಯು
ಯಾವುದೇ ರೈಲು ಮಾರ್ಗವನ್ನು
ಹೊಂದಿರುವುದಿಲ್ಲ.
ಕೊಂಕಣ ರೈಲ್ವೆ :
ಇದು ಪಶ್ಚಿಮ
ಕರಾವಳಿಯ ಮಹತ್ವಪೂರ್ಣವಾದ ರೈಲು
ಮಾರ್ಗ. ಇದು ಮಂಗಳೂರು
–
ಮುಂಬೈನ ನಡುವಿನ ಪ್ರಯಾಣದ
ಅವಧಿ 41 ಗಂಟೆಗಳಿಂದ 18 ಗಂಟೆಗಳಿಗೆ
ಕಡಿಮೆ ಮಾಡಿದೆ.ಇದರ
ಉದ್ದ ಕರ್ನಾಟಕದಲ್ಲಿ
273 ಕಿ.ಮೀ.ಗಳು.ಇದರಲ್ಲಿ
13 ಪ್ರಮುಖ ಮತ್ತು
310 ಇತರ ಸೇತುವೆಗಳಿವೆ
ಅವುಗಳಲ್ಲಿ ಶರಾವತಿ ಸೇತುವೆ
(2.2 ಕಿ.ಮೀ)
ಅತ್ಯಂತ ಉದ್ದವಾಗಿದೆ.ಕಾಳಿ
ನದಿ ಸೇತುವೆ (12 ಕಿ.ಮೀ.)ಯೂ
ಪ್ರಮುಖವಾಗಿದೆ.ಹಲವಾರು ಸುರಂಗ
ಮಾರ್ಗಗಳು ಮತ್ತು ಸೇತುವೆಗಳ
ಮೂಲಕ ಹಾದು ಹೋಗುವ
ಈ ಮಾರ್ಗವು ಅತ್ಯಂತ
ಸುಂದರವಾದ ಪ್ರಾಕೃತಿಕ ದೃಶ್ಯಾವಳಿಯಿಂದ
ಕೂಡಿದೆ.
ಮೆಟ್ರೋ ರೈಲು
:
ಬೆಂಗಳೂರು ಬೃಹತ್ ನಗರವಾಗಿ ಬೆಳೆದಿದ್ದು ಟ್ರಾಫಿಕ್ ಸಮಸ್ಯೆ ಅತಿಯಾಗಿದೆ.ಅದನ್ನು ನಿವಾರಿಸಲು ‘ನಮ್ಮ ಮೆಟ್ರೋ’ ನಗರ ರೈಲು ಯೋಜನೆಯನ್ನು ಜಾರಿಗೆ ತರಲಾಯಿತು.ಇದರಿಂದ ಅಕ್ಟೋಬರ್ 20, 2011 ರಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಬೆಂಗಳೂರ ನಗರದ ಬೈಯಪ್ಪನ ಹಳ್ಳಿಯಿಂದ ಎಂ.ಜಿ.ರಸ್ತೆಯವರೆಗೆ ಕಾರ್ಯಾರಂಭಗೊಂಡು ಲಕ್ಷಾಂತರ ಜನರು ಪ್ರಯಾಣಿಸುತ್ತಿದ್ದಾರೆ.ಇದರಿಂದ ತ್ವರಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಬಹುದು.ಇನ್ನೂ ಮೆಟ್ರೋ ರೈಲು ಮಾರ್ಗಗಳು ನಿರ್ಮಾಣ ಹಂತದಲ್ಲಿವೆ.
ವಾಯು ಸಾರಿಗೆ
ವಾಯು ಸಾರಿಗೆಯು
ಅತಿ ವೇಗ ಚಾಲಿತ
ಸಾರಿಗೆ ಮಾಧ್ಯಮ.ಇದು
ಪ್ರಯಾಣಿಕರು, ಅಂಚೆ ಮತ್ತು
ಬೆಲೆ ಬಾಳುವ ಹಗುರವಾದ
ವಸ್ತುಗಳನ್ನು ದೂರದ ಸ್ಥಳಗಳಿಗೆ
ಬೇಗ ಸಾಗಿಸುವದಕ್ಕೆ ಬಹಳ
ಉಪಯುಕ್ತವಾದುದು.ನೈಸರ್ಗಿಕ ವಿಪತ್ತುಗಳು
ಸಂಭವಿಸಿದಾಗ ಹಾಗೂ ಯುದ್ಧಗಳಂತಹ
ತುರ್ತು ಪರಿಸ್ಥಿತಿಗಳಲ್ಲಿ
ಪರಿಹಾರ ಕಾರ್ಯ ಕೈಗೊಳ್ಳುವುದಕ್ಕೂ
ನೆರವಾಗುವುದು.ಆದರೆ ಇದು
ದುಬಾರಿಯಾದ ಸಾರಿಗೆ ಮಾಧ್ಯಮವಾಗಿದ್ದು,
ಎಲ್ಲಾ ವರ್ಗದ ಜನರಿಗೂ
ಲಭ್ಯವಾಗದು.
ಕರ್ನಾಟಕದಲ್ಲಿ ಮೊದಲು
ವಿಮಾನಯಾನವನ್ನು 1946ರಲ್ಲಿ ಬೆಂಗಳೂರು
–
ಹೈದರಾಬಾದ್ ನಡುವೆ ‘ಡೆಕ್ಕನ್
ಏರ್ ವೇಸ್’ ಎಂಬ
ಕಂಪನಿಯು ಪ್ರಾರಂಭಿಸಿತು.ಭಾರತೀಯ
ವಿಮಾನ ಸಂಚಾರವು 1953ರಲ್ಲಿ
ರಾಷ್ಟ್ರೀಕರಣಗೊಂಡಿತು.ಇಂಡಿಯನ್
ಏರ್ ಲೈನ್ಸ್ ಸಂಸ್ಥೆ
ಆರಂಭಗೊಂಡ ಮೇಲೆ ಬೆಂಗಳೂರಿನಿಂದ
ವಿವಿಧ ಕೇಂದ್ರಗಳಿಗೆ ವಿಮಾನಯಾನ
ಸೌಲಭ್ಯವನ್ನು ಕಲ್ಪಿಸಲಾಯಿತು.ರಾಜ್ಯದ
ರಾಜಧಾನಿಯಾದ ಬೆಂಗಳೂರು 1996
ರಲ್ಲಿ ಅಂತರಾಷ್ಟ್ರೀಯ ವಿಮಾನ
ನಿಲ್ದಾಣವೆಂದು ಘೋಷಿಸಲ್ಪಟ್ಟಿತು.ಬೆಳಗಾವಿ,
ಹುಬ್ಬಳ್ಳಿ, ಮೈಸೂರು, ಮಂಗಳೂರುಗಳಲ್ಲಿ
ದೇಶೀಯ ವಿಮಾನ ನಿಲ್ದಾಣಗಳಿವೆ.ಹೊಸದಾಗಿ
ಹಾಸನ, ಕಲಬುರಗಿಗಳಲ್ಲಿ ವಿಮಾನ
ನಿಲ್ದಾಣಗಳು ನಿರ್ಮಾಣಗೊಳ್ಳುಲಿವೆ.
ಈ ಹಿಂದೆ ಬೆಂಗಳೂರು ನಗರದ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿದ್ದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಲಿಂದ 34 ಕಿ.ಮೀ.ದೂರದಲ್ಲಿ ದೇವನಹಳ್ಳಿಗೆ ದಿನಾಂಕ 24-05-2008 ರಂದು ಸ್ಥಳಾಂತರಗೊಂಡಿತು.ಹೆಚ್ ಎ ಎಲ್ ವಿಮಾನ ನಿಲ್ದಾಣವನ್ನು ಈಗ ಪೈಲಟಗಳ ತರಬೇತಿಗೆ ಬಳಸಲಾಗುತ್ತಿದೆ. ಹೊಸದಾಗಿ ನಿರ್ಮಿಸಿದ ದೇವನಹಳ್ಳಿ ವಿಮಾನ ನಿಲ್ದಾಣವು ಭಾರತದ ಮೊದಲ ‘ಹಸಿರು ಕ್ಷೇತ್ರದ ವಿಮಾನ ನಿಲ್ದಾಣ’ವಾಗಿದೆ.(Green field Airport) ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ.
ಜಲಸಾರಿಗೆ
ಕರ್ನಾಟಕದಲ್ಲಿ ಒಳನಾಡಿನ ಮತ್ತು ಸಮುದ್ರ ಜಲಸಂಚಾರಗಳೆರಡೂ ರೂಢಿಯಲ್ಲಿವೆ.ಅವುಗಳ ಲಭ್ಯತೆ ಬಹು ಸೀಮತಿವಾಗಿದ್ದು, ಅವು ಅಷ್ಟೊಂದು ಮಹತ್ವ ಹೊಂದಿಲ್ಲ. ಹಿಂದೆ ಒಳನಾಡಿನ ಜಲಸಂಚಾರವು ನಾಡದೋಣಿ, ಹರಿಗೋಲು, ತೆಪ್ಪಗಳಿಗೆ ಸೀಮಿತಗೊಂಡಿತ್ತು.ಇತ್ತೀಚೆಗೆ ಯಂತ್ರಚಾಲಿತ ದೋಣಿಗಳ ಸಂಚಾರ ರೂಡಿಗೆ ಬಂದಿದೆ.ಇದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವುದು.ಈ ಜಿಲ್ಲೆಗಳಲ್ಲಿ ಹರಿಯುವ ಗಂಗಾವಳಿ, ಕಾಳಿ, ಶರಾವತಿ, ಹಾಲಾಡಿ, ಚಕ್ರ, ಕೊಲ್ಲೂರು (ಉಡುಪಿ ಜಿಲ್ಲೆ), ಉದ್ಯಾವರ, ನೇತ್ರಾವತಿ ನದಿಗಳು ಮುಖ್ಯ ಒಳನಾಡಿನ ಜಲಸಾರಿಗೆಯನ್ನು ಪೂರೈಸುತ್ತವೆ.ಕೃಷ್ಣಾನದಿಯನ್ನು ದಾಟಲು ಕೆಲವೆಡೆ ದೋಣಿಗಳನ್ನು ಬಳಸಲಾಗುವುದು.ರಸ್ತೆ ಮತ್ತು ಸಂಚಾರ ಸೌಲಭ್ಯದ ಅಭಿವೃದ್ಧಿಗಾಗಿ ಜಲಸಾರಿಗೆ ವ್ಯವಸ್ಥೆ ಕಡಿಮೆಯಾಗಿದೆ.
ಬಂದರುಗಳು :
ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು.ಮೀನುಗಾರಿಕೆ, ವ್ಯಾಪಾರ, ಜನರ ಪ್ರಯಾಣ ಮತ್ತು ಸರಕುಗಳ ಸಾಗಾಣಿಕೆಗಳಿಗೆ ಹಡಗುಗಳನ್ನು ಬಳಸುತ್ತಾರೆ.ಕರ್ನಾಟಕದಲ್ಲಿ ಸುಮಾರು 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ 1957ರಲ್ಲಿ ಬಂದರು ಅಭಿವೃದ್ಧಿ ಇಲಾಖೆಯು ಸ್ಥಾಪಿತಗೊಂಡು ಸೌಲಭ್ಯಗಳ ವಿಸ್ತರಣೆ ಆರಂಭಗೊಂಡಿತು.‘ನವಮಂಗಳೂರು ಬಂದರು’ 1974ರ ಮೇ 4 ರಂದು ಭಾರತದ 9ನೇಯ ಪ್ರಮುಖ ಬಂದರು ಎಂದು ಘೋಷಿಸಲ್ಪಟ್ಟಿತು.ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು.ಈ ಬಂದರಿನಿಂದ ಕಬ್ಬಿಣದ ಅದಿರು, ಕಾಫಿ, ಸಾಂಬಾರ ಪದಾರ್ಥಗಳು, ಗೋಡಂಬಿ, ಶ್ರೀಗಂಧ, ಹೆಂಚು, ಕ್ರೋಮೈಡ್, ಗ್ರಾನೈಟ್ ಶಿಲೆ, ಸಂಸ್ಕರಿಸಿದ ಹಣ್ಣು ಮತ್ತು ಮೀನುಗಳು ರಫ್ತಾಗುತ್ತವೆ.ಪೆಟ್ರೋಲಿಯಂ ಆಮದಾಗುತ್ತದೆ.ಇದರ ಜೊತೆಗೆ ರಾಜ್ಯವು 10 ಚಿಕ್ಕ ಬಂದರುಗಳನ್ನು ಅಭಿವೃದ್ಧಿ ಪಡಿಸಿದೆ ಅವುಗಳೆಂದರೆ ಹಳೆಯ ಮಂಗಳೂರು ಬಂದರು, ಮಲ್ಪೆ, ಹಂಗಾರಕಟ್ಟೆ, ಕುಂದಾಪುರ, ಪಡುಬಿದ್ರಿ, ಭಟ್ಕಳ, ಹೊನ್ನಾವರ, ಬೇಲೆಕೇರಿ, ತದ್ರಿ ಮತ್ತು ಕಾರವಾರಗಳು.ಇದುಗಳಲ್ಲಿ ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ.ಇದು ಸರ್ವಋತು ಬಂದರಾಗಿದ್ದು ತನ್ಮೂಲಕ ಕಬ್ಬಿಣದ ಅದಿರು, ಮ್ಯಾಂಗನೀಸ್, ಗ್ರಾನೈಟ್ ಹಾಗೂ ವ್ಯವಸಾಯೋತ್ಪನ್ನಗಳು ರಫ್ತಾಗುತ್ತವೆ.
No comments:
Post a Comment