Sunday, 29 November 2020

ಹಕ್ಕಿ ಹಾರುತ್ತಿದೆ ನೋಡಿದಿರಾ?

Admin       Sunday, 29 November 2020

 ಕವಿಯ ಹೆಸರು: ದ.ರಾ.ಬೇಂದ್ರೆ

"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು.

ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.

ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.

ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ "ಧಾರವಾಡ ದ ಅಜ್ಜ" ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ.  ದ.ರಾ.ಬೇಂದ್ರೆ 

ಇದು ದ.ರಾ.ಬೇಂದ್ರೆ ಅವರು ಹಕ್ಕಿ ಹಾರುತ್ತಿದೆ ನೋಡಿದಿರಾ ಪದ್ಯವನ್ನು ಮೊದಲ ಬಾರಿಗೆ ಪ್ರಕಟಿಸಿದ ಪುಸ್ತಕ

‘ಹಕ್ಕಿ ಹಾರುತಿದೆ ನೋಡಿದಿರಾ?’ ಮೂಲಕವನದ ಪೂರ್ತಿಪಾಠ ಹೀಗಿದೆ:

ಇರುಳಿರುಳಳಿದು ದಿನ ದಿನ ಬೆಳಗೆ

ಸುತ್ತುಮುತ್ತಲೂ ಮೇಲಕೆ ಕೆಳಗೆ

ಗಾವುದ ಗಾವುದ ಗಾವುದ ಮುಂದೆ 

ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

ಹಕ್ಕಿ ಹಾರುತಿದೆ ನೋಡಿದಿರಾ? ||೧||


ಕರಿನೆರೆ ಬಣ್ಣದ ಪುಚ್ಚಗಳುಂಟು

ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು

ಕೆನ್ನನ ಹೊನ್ನನ ಬಣ್ಣಬಣ್ಣಗಳ

ರೆಕ್ಕೆಗಳೆರಡೂ ಪಕ್ಕದಲುಂಟು

ಹಕ್ಕಿ ಹಾರುತಿದೆ ನೋಡಿದಿರಾ? ||೨||


ನೀಲಮೇಘಮಂಡಲ-ಸಮ ಬಣ್ಣ !

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !

ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

ಹಕ್ಕಿ ಹಾರುತಿದೆ ನೋಡಿದಿರಾ? ||೩||


ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ

ಮಂಡಲ-ಗಿಂಡಲಗಳ ಗಡ ಮುಕ್ಕಿ

ತೇಲಿಸಿ ಮುಳುಗಿಸಿ ಖಂಡ-ಖಂಡಗಳ

ಸಾರ್ವಭೌಮರಾ ನೆತ್ತಿಯ ಕುಕ್ಕಿ

ಹಕ್ಕಿ ಹಾರುತಿದೆ ನೋಡಿದಿರಾ? ||೪||


ಯುಗ-ಯುಗಗಳ ಹಣೆಬರಹವ ಒರಸಿ

ಮನ್ವಂತರಗಳ ಭಾಗ್ಯವ ತೆರೆಸಿ

ರೆಕ್ಕೆಯ ಬೀಸುತ ಚೇತನೆಗೊಳಿಸಿ

ಹೊಸಗಾಲದ ಹಸುಮಕ್ಕಳ ಹರಸಿ

ಹಕ್ಕಿ ಹಾರುತಿದೆ ನೋಡಿದಿರಾ? ||೫||


ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ

ತಿಂಗಳೂರಿನ ನೀರನು ಹೀರಿ

ಆಡಲು ಹಾಡಲು ತಾ ಹಾರಾಡಲು

ಮಂಗಳಲೋಕದ ಅಂಗಳಕೇರಿ

ಹಕ್ಕಿ ಹಾರುತಿದೆ ನೋಡಿದಿರಾ? ||೬||


ಮುಟ್ಟಿದೆ ದಿಗ್ಮಂಡಲಗಳ ಅಂಚ

ಆಚೆಗೆ ಚಾಚಿದೆ ತನ್ನಯ ಚುಂಚ

ಬ್ರಹ್ಮಾಂಡಗಳನು ಒಡೆಯಲು ಎಂದೊ

ಬಲ್ಲರು ಯಾರಾ ಹಾಕಿದ ಹೊಂಚ

ಹಕ್ಕಿ ಹಾರುತಿದೆ ನೋಡಿದಿರಾ? ||೭||

………………………………………………………………………………….................

‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:

ಇರುಳಿರುಳಳಿದು ದಿನ ದಿನ ಬೆಳಗೆ

ಸುತ್ತುಮುತ್ತಲೂ ಮೇಲಕೆ ಕೆಳಗೆ

ಗಾವುದ ಗಾವುದ ಗಾವುದ ಮುಂದೆ 

ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

ಹಕ್ಕಿ ಹಾರುತಿದೆ ನೋಡಿದಿರಾ? ||೧||


ಈಗ ‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:

ಈರುಳ್ಳ್ಯುರುಳಲು ಮಾಡವು ಬೆಳಗೆ

ಅತ್ತಲೆತ್ತಲು ಕತ್ತಲೆಯೊಳಗೆ

ಯಾವುದ ! ಯಾವುದ ! ಯಾವುದ ಎಂದು 

ಕೇಳುವ ಹೇಳುವ ಹೊತ್ತಿನ ಒಳಗೆ

ಬೆಕ್ಕು ಹಾರುತಿದೆ ನೋಡಿದಿರಾ? ||೧||


ಮೂಲಕವನದ ಮೊದಲ ಸಾಲಿನಲ್ಲಿ ‘ಇರುಳಿರುಳಳಿದು ದಿನ ದಿನ ಬೆಳಗೆ’ ಎನ್ನುವ ವಾಕ್ಯವಿದ್ದರೆ, ಅಣಕುಕವನದಲ್ಲಿ ‘ಈರುಳ್ಳ್ಯುರುಳಲು ಮಾಡವು ಬೆಳಗೆ’ ಎನ್ನುವ ಸಾಲಿದೆ.

ಇವೆರಡೂ ಸಾಲುಗಳು ಶ್ರವಣಕ್ಕೆ ಒಂದೇ ತೆರನಾಗಿವೆ. ಆದರೆ ಮೂಲಕವನದ ಸಾಲು ಹಕ್ಕಿಯ ಬೆಳಗಿನ ಹಾರಾಟದೊಂದಿಗೆ ಕಾರ್ಯಾರಂಭ ಮಾಡಿದರೆ, ಅಣಕುವಾಡಿನ ಸಾಲು ಕತ್ತಲೆಯಲ್ಲಿ ಬೆಕ್ಕು ಮಾಡುವ ಹಾರಾಟವನ್ನು ಚಿತ್ರಿಸುತ್ತದೆ.

ಈ ಬೆಕ್ಕು ಮಾಡಕ್ಕೆ ಜಿಗಿದು ಅಲ್ಲಿ ಇಟ್ಟ ಈರುಳ್ಳಿಗಳನ್ನೆಲ್ಲ ಉರುಳಿಸುವದರೊಂದಿಗೆ ಕವನ ಪ್ರಾರಂಭವಾಗುತ್ತದೆ.

ಮೂಲಕವನದ ಮುಂದಿನ ಸಾಲುಗಳಲ್ಲಿ

‘ಗಾವುದ ಗಾವುದ ಗಾವುದ ಮುಂದೆ, 

ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ’ 

ಎನ್ನುವ ವರ್ಣನೆ ಇದ್ದರೆ, ಅಣಕವಾಡಿನಲ್ಲಿ

‘ಯಾವುದ ! ಯಾವುದ ! ಯಾವುದ ಎಂದು, 

ಕೇಳುವ ಹೇಳುವ ಹೊತ್ತಿನ ಒಳಗೆ’ 

ಎನ್ನುವ ವರ್ಣನೆ ಇದೆ.


ಈ ರೀತಿಯಾಗಿ, ಬೇಂದ್ರೆ ಮೂಲಕವನದ ಸಾಲುಗಳ ಅನುರಣನವನ್ನು ಅಣಕುವಾಡಿನಲ್ಲಿ ಅನುಸರಿಸಿದ್ದಾರೆ.


ಮೂಲಕವನವದ ಎರಡನೆಯ ನುಡಿಯಲ್ಲಿ ಹಕ್ಕಿಯ ಗರಿಗಳನ್ನು ವರ್ಣಿಸಲಾಗಿದೆ:

ಕರಿನೆರೆ ಬಣ್ಣದ ಪುಚ್ಚಗಳುಂಟು

ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು

ಕೆನ್ನನ ಹೊನ್ನನ ಬಣ್ಣಬಣ್ಣಗಳ

ರೆಕ್ಕೆಗಳೆರಡೂ ಪಕ್ಕದಲುಂಟು

ಹಕ್ಕಿ ಹಾರುತಿದೆ ನೋಡಿದಿರಾ? ||೨||


ಅಣಕುವಾಡಿನಲ್ಲಿ ಬೆಕ್ಕಿನ ಮುಖವರ್ಣನೆ ಇದೆ.

ಕರಿ-ನೆರೆ ಬಣ್ಣದ ಮೊಸಡೆಯ ಗಂಟು

ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು

ಹಚ್ಚನ ಬೆಚ್ಚನ ಪಚ್ಚೆಯ ಪೈರಿನ

ಬಣ್ಣದ ಕಣ್ಣು ಕಿವಿ ಬದಿಗುಂಟು

ಬೆಕ್ಕು ಹಾರುತಿದೆ ನೋಡಿದಿರಾ? ||೨||


ಮೂಲಕವನದ ಮೂರನೆಯ ನುಡಿ ಹೀಗಿದೆ:

ನೀಲಮೇಘಮಂಡಲ-ಸಮ ಬಣ್ಣ !

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !

ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

ಹಕ್ಕಿ ಹಾರುತಿದೆ ನೋಡಿದಿರಾ? ||೩||


ಅಣಕುವಾಡಿನ ಮೂರನೆಯ ನುಡಿಯೂ ಸಹ ಬೆಕ್ಕಿನ ಬಣ್ಣದ ಬಣ್ಣನೆಯನ್ನು ಮಾಡುತ್ತದೆ.

ಕಾಡಿಗೆಗಿಂತಲು ಕಪ್ಪೋ ಬಣ್ಣಾ

ಕತ್ತಲಕೇ ಕಾಲೊಡೆದವೊ ಅಣ್ಣಾ

ಕೂದಲ ಕೂದಲ ನಿಗುರಿಸಿಕೊಂಡು

ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ

ಬೆಕ್ಕು ಹಾರುತಿದೆ ನೋಡಿದಿರಾ? ||೩||


ಮೂಲಕವನದಲ್ಲಿ ಹಕ್ಕಿಗೆ ಮಾಡಲಾದ ವರ್ಣನೆಯ ಸಮಾಂತರ ವರ್ಣನೆ ಅಣಕುವಾಡಿನಲ್ಲಿಯೂ ಇದೆ. ಅಲ್ಲದೆ ‘ಕತ್ತಲಕೇ ಕಾಲೊಡೆದವೊ ಅಣ್ಣಾ’

ಎನ್ನುವ ಸಾಲು ನಗುವನ್ನು ಉಕ್ಕಿಸುತ್ತದೆ.


ಮೂಲಕವನದ ನಾಲ್ಕನೆಯ ನುಡಿ ಕಾಲಪಕ್ಷಿಯ ಗಂಭೀರ-ಭಯಂಕರ ಕಾರ್ಯವನ್ನು ವರ್ಣಿಸುತ್ತದೆ: 

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ

ಮಂಡಲ-ಗಿಂಡಲಗಳ ಗಡ ಮುಕ್ಕಿ

ತೇಲಿಸಿ ಮುಳುಗಿಸಿ ಖಂಡ-ಖಂಡಗಳ

ಸಾರ್ವಭೌಮರಾ ನೆತ್ತಿಯ ಕುಕ್ಕಿ

ಹಕ್ಕಿ ಹಾರುತಿದೆ ನೋಡಿದಿರಾ? ||೪||


ಅಣಕುವಾಡಿನಲ್ಲಿ ಬೆಕ್ಕು ಮಾಡುವ ಭಯಂಕರ ಕಾರ್ಯ(!)ಗಳ ವರ್ಣನೆ ಇದೆ:

ರಾಜ್ಯದ ಹೆಗ್ಗಣಗಳ ತಾನೊಕ್ಕಿ

ಜೊಂಡಿಗದಾ ಹುಲುಗಡಣವ ಮುಕ್ಕಿ

ಹಾರಿಸಿ ಹೇಂಟೆಯ ಹಿಂಡುಹಿಂಡುಗಳ

ಜಂಭದ ಕೋಳಿಯ ನೆತ್ತಿಯ ಕುಕ್ಕಿ

ಬೆಕ್ಕು ಹಾರುತಿದೆ ನೋಡಿದಿರಾ? ||೪||


ಕಾಲಪಕ್ಷಿ ಹಾಗೂ ಬೆಕ್ಕು ಇವುಗಳ ಘನತೆ ಬೇರೆಯಾಗಿರಬಹುದು. ಇವುಗಳ ಕಾರ್ಯರಂಗಗಳು ಬೇರೆಯಾಗಿರಬಹುದು. ಬೆಕ್ಕು ಮಾಡುವ ಕಾರ್ಯ ಹಾಸ್ಯವಾಗಿ ಕಾಣಲೂಬಹುದು. ಆದರೆ ಈ ಎರಡೂ ಕಾರ್ಯಗಳಲ್ಲಿಯ ಅಂತರಂಗ ಒಂದೇ ಆಗಿದೆ.


ಸಮಾಂತರವಾಗಿ ಚಲಿಸುತ್ತಿದ್ದ ಈ ಎರಡೂ ಕವನಗಳು ಇನ್ನು ಮುಂದಿನ ನುಡಿಗಳಲ್ಲಿ ಸ್ವಲ್ಪ ಬೇರೆಯಾಗಿ ಸಾಗುತ್ತವೆ.

ಮೂಲಕವನದ ಐದನೆಯ ನುಡಿ ಹೀಗಿದೆ:

ಯುಗ-ಯುಗಗಳ ಹಣೆಬರಹವ ಒರಸಿ

ಮನ್ವಂತರಗಳ ಭಾಗ್ಯವ ತೆರೆಸಿ

ರೆಕ್ಕೆಯ ಬೀಸುತ ಚೇತನೆಗೊಳಿಸಿ

ಹೊಸಗಾಲದ ಹಸುಮಕ್ಕಳ ಹರಸಿ

ಹಕ್ಕಿ ಹಾರುತಿದೆ ನೋಡಿದಿರಾ? ||೫||

ಮೂಲಕವನವು ಇಲ್ಲಿ ಶುಭ ಕೋರುವ ಕಾಲಪಕ್ಷಿಯಾಗಿದೆ. ಆದರೆ ಬೆಕ್ಕು ಮಾತ್ರ ತನ್ನ ಚಾಳಿಯನ್ನು ಬಿಡದು:

ಹಾಲಿನ ಗಡಿಗೆಯ ತಳವನು ಒರಸಿ

ಮೊಸರಿನ ಮಡಿಕೆಯ ಮುಚ್ಚಳ ಸರಿಸಿ

ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ

ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ

ಬೆಕ್ಕು ಹಾರುತಿದೆ ನೋಡಿದಿರಾ? ||೫||

ಹಾಲಿನ ಗಡಿಗೆಯನ್ನು ಸ್ವಚ್ಛ ಮಾಡುವ ಈ ಬೆಕ್ಕು ಮೊಸರನ್ನೂ ಸಹ ನೆಕ್ಕುತ್ತದೆ. ಅಲ್ಲಿರುವ ಪಾತ್ರೆಗಳನ್ನೆಲ್ಲ ಉರುಳಿಸುತ್ತದೆ. ಇಷ್ಟಕ್ಕೆ ಇದರ ಕಿಡಿಗೇಡಿತನ ನಿಲ್ಲುವದಿಲ್ಲ. ಮನೆಯವರು ತೆಗೆದಿಟ್ಟ ಬಿಸಿ ಹಾಲಿನಲ್ಲಿ ತುಸು ಮಜ್ಜಿಗೆ ಬೆರಸಿಬಿಡುತ್ತದೆ. ಬೇಂದ್ರೆಯವರ ವಿನೋದಸೃಷ್ಟಿಗೆ ಈ ಸಾಲು ಅತ್ಯುತ್ತಮ ಉದಾಹರಣೆಯಾಗಿದೆ.


ಆರನೆಯ ನುಡಿಗಳಲ್ಲಿ ರಚನಾ ಸಾದೃಶ್ಯವಿದೆ.

ಮೂಲಕವನ ಹೀಗಿದೆ:

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ

ತಿಂಗಳೂರಿನ ನೀರನು ಹೀರಿ

ಆಡಲು ಹಾಡಲು ತಾ ಹಾರಾಡಲು

ಮಂಗಳಲೋಕದ ಅಂಗಳಕೇರಿ

ಹಕ್ಕಿ ಹಾರುತಿದೆ ನೋಡಿದಿರಾ? ||೬||


ಅಣಕುವಾಡು ಹೀಗಿದೆ:

ಇಲಿಗಳು ಬೆಳ್ಳಗೆ ಇದ್ದರು ಬಿಡದು

ಬೆಳ್ಳಗಿದ್ದದನು ಕುಡಿದೂ ಕುಡಿದೂ

ನೋಡಿ ಚಂದ್ರನನು ಬೆಣ್ಣೆಯದೆಂದೊ

ಮುಗಿಲಿನಂಗಳಕೆ ಸಿಟ್ಟನೆ ಸಿಡಿದು

ಬೆಕ್ಕು ಹಾರುತಿದೆ ನೋಡಿದಿರಾ? ||೬||


ಕಾಲಪಕ್ಷಿ ಮುಗಿಲಿನಲ್ಲಿ ಹಾರಾಡಿದರೆ, ಈ ಬೆಕ್ಕು ತಾನೂ ಸಹ ಮುಗಿಲಿನಲ್ಲಿರುವ ಚಂದ್ರನನ್ನು ಹಿಡಿಯಲು ಜಿಗಿಯುತ್ತದೆ, ಬೆಣ್ಣೆಯೆಂದು ತಿಳಿದು!


ಮೂಲಕವನದ ಏಳನೆಯ ನುಡಿಯಲ್ಲಿ ಕಾಲಪಕ್ಷಿಯ ಭವಿಷ್ಯತ್ ಯೋಜನೆಗಳ ಹೊಳಹು ಇದೆ:

ಮುಟ್ಟಿದೆ ದಿಗ್ಮಂಡಲಗಳ ಅಂಚ

ಆಚೆಗೆ ಚಾಚಿದೆ ತನ್ನಯ ಚುಂಚ

ಬ್ರಹ್ಮಾಂಡಗಳನು ಒಡೆಯಲು ಎಂದೊ

ಬಲ್ಲರು ಯಾರಾ ಹಾಕಿದ ಹೊಂಚ

ಹಕ್ಕಿ ಹಾರುತಿದೆ ನೋಡಿದಿರಾ? ||೭||

ಅಣಕುವಾಡಿನಲ್ಲಿಯೂ ಸಹ ಬೆಕ್ಕು ತನ್ನ ಭವಿಷ್ಯದ ಕಾರ್ಯಗಳಿಗಾಗಿ ಹೊಂಚಿ ನಿಂತಿರುವ ವರ್ಣನೆ ಇದೆ:

ಹಿಂದಕೆ ಮುಂದಕೆ ಚಾಚಿದೆ ಕಾಲ

ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ

ಬೆಳುದಿಂಗಳ ಹಾಲೆನೆ ತಿಳುಕೊಂಡೊ

ಬಲ್ಲರು ಯಾರಿವರಪ್ಪನ ಸಾಲ!

ಬೆಕ್ಕು ಹಾರುತಿದೆ ನೋಡಿದಿರಾ? ||೭||

ಈ ರೀತಿಯಾಗಿ ಮೂಲಕವನದ ತದ್ವತ್ ಅನುಕರಣೆಯನ್ನು ಈ ಅಣಕುವಾಡು ಮಾಡುತ್ತದೆ.

ಮೂಲಕವನವು ಬೇಂದ್ರೆಯವರ ದಾರ್ಶನಿಕ ಪ್ರತಿಭೆಯನ್ನು ತೋರಿಸಿದರೆ, ಅಣಕುವಾಡು ಅವರ ವಿನೋದಸೃಷ್ಟಿಯ ಪ್ರತಿಭೆಯನ್ನು ತೋರಿಸುತ್ತದೆ. ಆದರೆ, ಈ ಎರಡೂ ರಚನೆಗಳಲ್ಲಿ ಕಂಡುಬರುವ ಕಾವ್ಯರಚನಾ ಕೌಶಲ್ಯವು ಅಪ್ರತಿಮವಾಗಿದೆ. 

‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಸ್ವತಂತ್ರ ಕವನವೆಂದು ಓದಿದರೂ ಸಹ , ಇದು ಅಷ್ಟೇ ಸ್ವಾರಸ್ಯಪೂರ್ಣವಾದ ಕವನವಾಗಿದೆ.


logoblog

Thanks for reading ಹಕ್ಕಿ ಹಾರುತ್ತಿದೆ ನೋಡಿದಿರಾ?

Previous
« Prev Post

No comments:

Post a Comment