Friday, 4 December 2020

ಆಧುನಿಕ ಯುರೋಪ್

Admin       Friday, 4 December 2020

* ಪ್ರಪಂಚದ ಇತಿಹಾಸದಲ್ಲಿ 15 ಮತ್ತು 16ನೇ ಶತಮಾನದ ಕಾಲದಲ್ಲಿ ಯುರೋಪ್ ಹೊಸ ಯುಗಕ್ಕೆ ಪ್ರವೇಶಿಸಿತು.

* ಮಧ್ಯಯುಗದ ಅಂತ್ಯ ಹಾಗೂ ಆಧುನಿಕ ಯುಗದ ಆರಂಭವು ಯುರೋಪಿನ ಇತಿಹಾಸದ ಎರಡು ಪ್ರಮುಖ ಘಟನೆಗಳಾಗಿ ಪರಿಣಮಿಸಿದೆ.

* ಟರ್ಕಿಯರಿಂದ ಕಾನ್ಸ್ ಟಾಂಟಿನೋಪಲ್ ನ ವಶ ಮತ್ತು ಹೆಚ್ಚಿದ ವ್ಯಾಪಾರ ಚಟುವಟಿಕೆಗಳು ಪುನರುಜ್ಜೀವನ, ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣಾ ಚಳುವಳಿ ಹಾಗೂ ಕೈಗಾರಿಕಾ ಕ್ರಾಂತಿಗಳ ಬೆಳವಣಿಗೆಗೆ ಕಾರಣವಾದವು.

ಪುನರುಜ್ಜೀವನ

* ಪುನರುಜ್ಜೀವನ ಪದದ ಅರ್ಥವು ಪುನರ್ಜನ್ಮ ಅಥವಾ ಪುನರ್ ಜಾಗೃತಿ.

* ಇದು ಯುರೋಪಿನ ಮಧ್ಯಯುಗದ ಅಂತ್ಯದಲ್ಲಿ ಉಂಟಾದ ಎಲ್ಲಾ ಬೌದ್ಧಿಕ ಬದಲಾವಣೆಗಳನ್ನು ಒಟ್ಟಾಗಿ ಸೂಚಿಸುವ ಪದ ಎನ್ನಬಹುದು.

* 14 ಮತ್ತು 15ನೇ ಶತಮಾನವು ಪಶ್ಚಿಮ ಯುರೋಪಿನ ಕಲೆ, ವಾಸ್ತುಶಿಲ್ಪ, ಧರ್ಮ, ತತ್ವಶಾಸ್ತ್ರ, ವಿಜ್ಞಾನ ಮತ್ತು ರಾಜಕೀಯ ವಿಷಯಗಳ ಬೆಳವಣಿಗೆಯನ್ನು ಸೂಚಿಸುತ್ತವೆ.

* ಜ್ಞಾನ ಪುನರುಜ್ಜೀವನ ಚಳುವಳಿಯು ಮೊದಲು ಪ್ರಾರಂಭವಾದದ್ದು ಇಟಲಿಯಲ್ಲಿ. ಆನಂತರ ಅದು ಯುರೋಪಿನ ಇತರೆ ಭಾಗಗಳೆಗೆ ಹರಡಿತು.

* ಆದ್ದರಿಂದ ಇಟಲಿಯನ್ನು ಪುನರುಜ್ಜೀವನದ ತವರು ಎಂಬುದಾಗಿ ಕರೆಯುತ್ತಾರೆ.

ಪುನರುಜ್ಜೀವನಕ್ಕೆ ಕಾರಣಗಳು

* ಕ್ರಿ.ಶ 1453ರಲ್ಲಿ ಕಾನ್ಸ್ ಟಾಂಟಿನೋಪಲ್ ನ ಪತನ

* ಊಳಿಗಮಾನ್ಯ ಪದ್ಧತಿಯ ಅವನತಿ

* ಜರ್ಮನಿಯ ಗುಟನ್ ಬರ್ಗ್ ನ ಮುದ್ರಣ ಯಂತ್ರದ ಸಂಶೋಧನೆ

* ಭೌಗೋಳಿಕ ಅನ್ವೇಷಣೆಗಳು

* ಯುರೋಪಿನಲ್ಲಿ ರಾಜಕುಮಾರರು, ಶ್ರೀಮಂತರು, ವ್ಯಾಪಾರಿಗಳು ಮತ್ತು ಪಾದ್ರಿಗಳು ವಿದ್ವಾಂಸರಿಗೆ, ಕಲಾವಿದರಿಗೆ, ವಿಜ್ಞಾನಿಗಳಿಗೆ ಮತ್ತು ತತ್ವಜ್ಞಾನಿಗಳನ್ನು ಪೋಷಿಸಿದರು.

ಪುನರುಜ್ಜೀವನದ ಲಕ್ಷಣಗಳು

* ಪುನರುಜ್ಜೀವನ ಕಾಲದ ಜನರ ದೃಷ್ಠಿಕೋನ ಮಧ್ಯಯುಗಕ್ಕಿಂತಲೂ ಭಿನ್ನವಾಗಿತ್ತು. ಜಗತ್ತು ಮತ್ತು ಮಾನವವನ್ನು ಕುರಿತು ಜನರ ಅಭಿಪ್ರಾಯ ಬದಲಾಯಿತು. ಇದನ್ನು ಮಾನವತಾವಾದ ಎಂದು ಕರೆಯಲಾಯಿತು. ಮಾನವತವಾದಿಗಳು ಉತ್ಕೃಷ್ಠ ಸಾಹಿತ್ಯದ ಬಗ್ಗೆ ಆಸಕ್ತಿ ತೆಳೆದರು. ಮಾನವ ಜೀವನಕ್ಕೆ ಸಂಬಂಧಿಸಿದ ಕ್ರಮಗಳಿಗೆ ಒತ್ತು ನೀಡುವ ಪ್ರಯತ್ನ ನಡೆದವು.

* ಪುನರುಜ್ಜೀವನ ಕಾಲದ ಬರಹಗಾರರು ಇಂಗ್ಲೀಷ್, ಇಟಾಲಿಯನ್ ಮತ್ತು ಜರ್ಮನ್ ಭಾಷೆಯಲ್ಲಿ ಬರೆದು ಸಾಹಿತ್ಯ ಶ್ರೀಮಂತಗೊಳಿಸಿದರು.

* ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಬದಲಾವಣೆಯಾಯಿತು. ಕೃಷಿಕ ಜೀವನವು ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಿಗೆ ಬದಲಾಯಿತು. ಸಾಮಾಜಿಕ ಸಂಬಂಧಗಳಲ್ಲೂ ಮೂಲಭೂತವಾಗಿ ಬದಲಾವಣೆಯಾದವು.

* ಪುನರುಜ್ಜೀವನದ ಮುಖ್ಯ ಲಕ್ಷಣವೆಂದರೆ ಜನರು ಶ್ರೇಷ್ಠ ಸಂಸ್ಕೃತಿಯ ಬಗ್ಗೆ ತಳೆದ ಆಸಕ್ತಿ, ಯಾವುದು ಶ್ರೇಷ್ಠವೆನಿಸುವುದೋ ಅದನ್ನು ಅನುಕರಿಸುವ ಪ್ರವೃತ್ತಿ. ಇದನ್ನು ಶ್ರೇಷ್ಠಾನುಕರಣೆ ಎಂದು ಕರೆಯುತ್ತಾರೆ.

* ಪುನರುಜ್ಜೀವನದ ಲಕ್ಷಣಗಳು ಮೊಟ್ಟಮೊದಲು ಇಟಲಿಯಲ್ಲಿ ಕಾಣಿಸಿಕೊಂಡವು. ಕಾರಣ ಗ್ರೀಸ್ ಮತ್ತು ರೋಮ್ ನ ವಿದ್ವಾಂಸರು ಇಟಲಿಗೆ ವಲಸೆ ಬಂದು ನೆಲೆಸಿದರು.

ಪುನರುಜ್ಜೀವನದ ಸಾಹಿತ್ಯ

* ಇಟಲಿಯ ಅನೇಕ ಸಾಹಿತ್ಯ ದಿಗ್ಗಜರ ತವರೂರಾಗಿತ್ತು.

* ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಮತ್ತು ಸ್ಪೈನ್ ದೇಶಗಳೂ ಕೂಡಾ ಸಾಕಷ್ಟು ಸಾಹಿತ್ಯ ಸುಧೆಯನ್ನು ಹರಿಸಿದವು.

* ಈ ಕಾಲದ ಸಾಹಿತ್ಯದ ತಿರುಳು ಧರ್ಮವಾಗಿರದೆ ಪ್ರಾಪಂಚಿಕ ವಿಷಯವಾಗಿತ್ತು.

* ಮಾನವನ ದೇಹ, ಅಂಗಸೌಷ್ಟವ ಮುಂತಾದ ವಿಷಯಗಳ ಬಗ್ಗೆ ಬರೆದರು.

* ಲ್ಯಾಟಿನ್ ಬದಲು ಯುರೋಪಿನ ಪ್ರಾದೇಶಿಕ ಭಾಷೆಗಳು ಬಳಕೆಗೆ ಬಂದವು.

* ಪೆಟ್ಟ್ರಾರ್ಕ್ ನನ್ನು ಪುನರುಜ್ಜೀವನದ ಜನಕ ಎಂದು ಕರೆಯುತ್ತಾರೆ. ಇವನು ಸುಮಾರು 200 ಲ್ಯಾಟಿನ್ ಮತ್ತು ಗ್ರೀಕ್ ಹಸ್ತಪ್ರತಿಗಳನ್ನು ಸಂಗ್ರಹಿಸಿದನು. ಇವನ ಗೀತೆಗಳು ಮತ್ತು ಸಾನೆಟ್ ಗಳು ಪ್ರಖ್ಯಾತವಾಗಿವೆ. ಮಾನವನನು ಇಹಲೋಕದಲ್ಲಿ ಕಾಣುವ ಸುಖ-ದುಃಖಗಳ ಅಗಾಧ ಚಿಂತನೆಯನ್ನು ಪೆಟ್ಟ್ರಾರ್ಕ್ ನ ಕವಿತೆಗಳಲ್ಲಿ ಕಾಣಬಹುದು.

* ಪೆಟ್ಟ್ರಾರ್ಕ್ – ಆಫ್ರಿಕಾ

* ಬೊಕಾಷಿಯೋ – ಡೆಕಾಮೆರಾನ್(ಇಟಲಿಯನ್ ಭಾಷೆಯಲ್ಲಿರುವ ನೂರು ಕಥೆಗಳ ಸಂಗ್ರಹ)

* ಡಾಂಟೆ – ಡಿವೈನ್ ಕಾಮಿಡಿ 

* ಛಾಸರ್ – ಕ್ಯಾಂಟರ್ ಬರಿ ಟೇಲ್ಸ್ 

* ಸರ್ವಾಂಟಿಸ್ – ಡಾನ್ ಕ್ವಿಕ್ಸಾಟ್

* ಥಾಮಸ್ ಮೋರ್ – ಯುಟೋಪಿಯಾ

* ಇಂಗ್ಲೆಂಡಿನ ಶೇಕ್ಸ್ ಪಿಯರ್ ಒಬ್ಬ ಶ್ರೇಷ್ಠ ಕವಿ ಮತ್ತು ನಾಟಕಕಾರ. ಇವನು ಅನೇಕ ದುಃಖಾಂತ್ಯ-ಸುಖಾಂತ್ಯ ನಾಟಕಗಳನ್ನು ಬರೆದಿದ್ದಾನೆ.

* ಲಂಡನ್ ನಲ್ಲಿ ಸ್ಥಾಪಿತವಾದ ಸೈಂಟ್ ಪಾಲ್ ಶಾಲೆಯು ಈ ನೂತನ ಜ್ಞಾನದ ಕಲಿಕೆಗಾಗಿಯೇ ಮೀಸಲಾಗಿದ್ದಿತು.

ಪುನರುಜ್ಜೀವನದಲ್ಲಿ ಕಲೆ(ವಾಸ್ತುಶಿಲ್ಪ ಮತ್ತು ಶಿಲ್ಪಕಲೆ)

* ಪುನರುಜ್ಜೀವನದ ಕಾಲದಲ್ಲಿ ಕಲೆಯು ಅತ್ಯಂತ ಸರಳವಾಗಿಯೂ, ಸ್ವಾಭಾವಿಕವಾಗಿಯೂ ಇದ್ದಿತು.

* ಪೌರಾಣಿಕ ವ್ಯಕ್ತಿಗಳು, ದೇವಪುತ್ರ ಏಸುಕ್ರಿಸ್ತ ಮತ್ತು ಅವನ ಶಿಷ್ಯರನ್ನು ಮಾನವ ಸಹಜ ಭಾವನೆಗಳೊಂದಿಗೆ ಶಿಲ್ಪ ಚಿತ್ರಗಳಲ್ಲಿ ಕಲಾವಿದರು ಮೂಡಿಸಿದರು.

* 16ನೇ ಶತಮಾನದಲ್ಲಿ ಇಟಲಿಯಲ್ಲಿ ಅನೇಕ ಕಲಾಕಾರರಿದ್ದರು.

* ಮೈಖಲ್ ಆಂಜೆಲೋ, ರಾಫೇಲ್, ಲಿಯೋನಾರ್ಡ್ ಡಾ ವಿಂಚಿ ಮತ್ತು ಟಿಟಿಯಾನ್ ಪ್ರಮುಖ ಕಲಾಕಾರರಾಗಿದ್ದಾರೆ.

* ಮೈಖಲ್ ಆಂಜೆಲೋ – ಆ್ಯಡಂ ಮತ್ತು ಕೊನೆಯ ತಿರ್ಮಾನ

* ಲಿಯೋನಾರ್ಡ್ ಡಾ ವಿಂಚಿ – ಮೊನಾಲಿಸ ಮತ್ತು ಲಾಸ್ಟ್ ಸಪ್ಪರ್

* ರಾಫೇಲ್ – ಸಿಸ್ಟೈನ್ ಮಡೋನ್ನ

* ಟಿಟಿಯನ್ – ಅಸಂಪ್ಷನ್ ಆಫ್ ದಿ ವರ್ಜಿನ್

* ಇವು ಆ ಕಾಲದ ಪ್ರಮುಖ ವರ್ಣಚಿತ್ರಗಳಾಗಿವೆ.

ಪುನರುಜ್ಜೀವನದ ಕಾಲದಲ್ಲಿ ವಿಜ್ಞಾನ(ಆಧುನಿಕ ವಿಜ್ಞಾನ)

* ಪುನರುಜ್ಜೀವನದ ಕಾಲದಿಂದಲೇ ಆಧುನಿಕ ವಿಜ್ಞಾನವು ಜನ್ಮ ತಾಳಿತು.

* ವಿಜ್ಞಾನವು ಧಾರ್ಮಿಕ ನಂಬಿಕೆಗಳನ್ನು ಬದಿಗೊತ್ತಿ ಹೊಸ ಶೋಧಗಳನ್ನು ಪ್ರಕಟಿಸಿತು.

* ಮಾನವನ ಬಗ್ಗೆ ತಿಳಿಯುವ ವಿಷಯವು ಈ ಕಾಲದಲ್ಲಿ ಹೊಸ ಅವಿಷ್ಕಾರಗಳಿಗೆ ನಾಂದಿಯಾಯಿತು.

* ಮಧ್ಯಯುಗದಲ್ಲಿ ಜನರು ಯಾವುದೇ ರೀತಿ ಪ್ರಶ್ನಿಸದೆ ಎಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದರು.

* ಅವಶ್ಯಕತೆ ಮತ್ತು ಪ್ರಶ್ನಿಸುವ ಮನೋಭಾವ ಬೆಳೆದಂತೆ ವೈಜ್ಞಾನಿಕ ಸಂಶೋಧನೆಗಳು ಹೆಚ್ಚಿದವು.

* ಫ್ರಾನ್ಸಿಸ್ ಬೇಕನ್ ಪ್ರಾಚೀನ ವೈಜ್ಞಾನಿಕ ತಿರ್ಮಾನಗಳು ಪರಿಣಿತ ಜ್ಞಾನವನ್ನು ಪ್ರತಿನಿಧಿಸುದಿಲ್ಲವೆಂದು ಘೋಷಿಸಿದನು.

* ಡೆಸ್ಕಾರ್ಟಿಸ್ ನು ಸಂದೇಹ ಮಾರ್ಗಕ್ಕೆ ಕೊಡುಗೆ ನೀಡಿ ಯಾವುದನ್ನೇ ಆದರೂ ಒಪ್ಪಿಕೊಳ್ಳವ ಮೊದಲು ಪ್ರಶ್ನಿಸುವ ವಿಷಯವನ್ನು ಮಂಡಿಸಿದನು.

* ಪೋಲೆಂಡಿನ ಕೊಪರ್ನಿಕಸ್ ನು ಗ್ರೀಸ್ ನ ಟಾಲೆಮಿಯ ಭೂಕೇಂದ್ರವಾದವು ಸುಳ್ಳೆಂದು ತೋರಿಸಿ ಗ್ರಹಗಳ ಸೌರ ಕೇಂದ್ರೀಯ ಸಿದ್ಧಾಂತವನ್ನು ಪ್ರತಿಪಾದಿಸಿದನು.

* ಕೆಪ್ಲರ್ ನು ಒಬ್ಬ ಜರ್ಮನಿಯ ವಿಜ್ಞಾನಿ. ಗ್ರಹಗಳು ಸೂರ್ಯನನ್ನು ಅಂಡಾಕೃತಿಯಲ್ಲಿ ಸುತ್ತುತ್ತಿವೆ ಎಂದು ತಿಳಿಸಿದನು.

* ಗೆಲಿಲಿಯೋ ದೂರದರ್ಶಕ ಯಂತ್ರವನ್ನು ಕಂಡುಹಿಡಿದನು. ಕೊಪರ್ನಿಕಸ್ ನ ಪರಿಕಲ್ಪನೆಯನ್ನು ಬೆಂಬಲಿಸಿದನು. ಆದರೆ ಚರ್ಚಿನ ಒತ್ತಡಕ್ಕೆ ಮಣಿದು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡನು.

* ನ್ಯೂಟನ್ನನು ಗುರುತ್ವಾಕರ್ಷಣೆಯ ನಿಯಮಗಳನ್ನು ಕಂಡುಹಿಡಿದನು ಹಾಗೂ ಎಲ್ಲಾ ಆಕಾಶಕಾಯಗಳ ಚಲನೆಗಳು ಗುರುತ್ವಾಕರ್ಷಣೆಯ ನಿಯಂತ್ರಣಕ್ಕೆ ಒಳಪಟ್ಟಿವೆ ಎಂದು ತಿಳಿಸಿದನು.

* ರಸಾಯನಶಾಸ್ತ್ರ, ವೈದ್ಯಶಾಸ್ತ್ರ ಮತ್ತು ಶರೀರ ಶಾಸ್ತ್ರಗಳ ಅಭ್ಯಾಸದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸಲಾಯಿತು.

* ಆಂಡ್ಯೂ ವಸಾಲಿಯಸ್ ಶರೀರದ ಶಸ್ತ್ರಚಿಕಿತ್ಸೆಯನ್ನು ಮಾಡಿ ಅಸ್ತಿಪಂಜರ, ಮಾಂಸ ಖಂಡಗಳು, ಮೆದುಳು, ಜೀರ್ಣಾಂಗ ಮತ್ತು ಜನನೇಂದ್ರಿಯಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಮಾಡಬಹುದೆಂಬುದರ ಬಗ್ಗೆ ಶರೀರ ಶಾಸ್ತ್ರದ ಮೇಲೆ ವೈಜ್ಞಾನಿಕ ಗ್ರಂಥವನ್ನು  ಬರೆದನು.

ಪುನರುಜ್ಜೀವನದ ಪರಿಣಾಮಗಳು

* ಪುನರುಜ್ಜೀವನ ಕಾಲದಲ್ಲಿ ಜೀವನವನ್ನು ಕುರಿತ ಮಾನವೀಯತೆಯ ಮಾರ್ಗ ಬೆಳೆಯಿತು.

* ವಿಶ್ವದ ಬಗ್ಗೆ ವೈಜ್ಞಾನಿಕ ದೃಷ್ಠಿ ಬೆಳೆಯಿತು.

* ನಕ್ಷತ್ರಗಳ ಚಲನವಲನಗಳ ಜ್ಞಾನ ಬೆಳೆದು, ಸಾಗರ ಮಾರ್ಗಗಳ ಶೋಧನೆ, ಭೂ ಅನ್ವೇಷಣೆ ಸಾಧ್ಯವಾಯಿತು.

* ವೈಜ್ಞಾನಿಕ ಶೋಧನೆಗಳು ತಂತ್ರಜ್ಞಾನದಿಂದ ಮತ್ತು ಕೈಗಾರಿಕಾ ಕ್ರಾಂತಿಯು ಸಾಧ್ಯವಾಯಿತು.

* ಅಂಧಶ್ರದ್ಧೆಯನ್ನು ಖಂಡಿಸಲಾಯಿತು. ಹೊಸ ಚಿಂತನೆಗಳಿಗೆ ಪ್ರೋತ್ಸಾಹ ದೊರೆಯಿತು.

* ಹೊಸದೃಷ್ಠಿ ಮೂಡಿದ್ದರಿಂದ ಕ್ಯಾಥೋಲಿಕ್ ಚರ್ಚ್ ನಲ್ಲಾದ ಬದಲಾವಣೆ ಅಥವಾ ಧಾರ್ಮಿಕ ಸುಧಾರಣೆ ಚಳುವಳಿಗೆ ನಾಂದಿಯಾಯಿತು.

ಭೌಗೋಳಿಕ ಅನ್ವೇಷಣೆಗಳು

* ಕ್ರಿ.ಶ 16ನೇ ಶತಮಾನವನ್ನು “ಭೌಗೋಳಿಕ ಅನ್ವೇಷಣೆಗಳ ಯುಗ” ಎಂದು ಕರೆಯಲಾಗಿದೆ.

* ಮಧ್ಯಕಾಲದ ಅಂತ್ಯದವರೆಗೂ ಯುರೋಪಿಯನ್ನರಿಗೆ ಭೌಗೋಳಿಕ ಜ್ಞಾನವು ಅಷ್ಟಾಗಿ ತಿಳಿದಿರಲಿಲ್ಲ.

* ಆನಂತರದ ಬೆಳವಣಿಗೆಗಳಲ್ಲಿ ಯುರೋಪಿಯನ್ನರು ಪ್ರಪಂಚದ ಅನೇಕ ಭಾಗಗಳಿಗೆ ಸಮುದ್ರ ಮಾರ್ಗ ಕಂಡುಹಿಡಿದರು.

* ಹೊಸ ಖಂಡಗಳಾದ ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳನ್ನು ಬೆಳಕಿಗೆ ತಂದರು.

ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳು

* ಕ್ರಿ.ಶ 1453ರಲ್ಲಿಟರ್ಕರು ಕಾನ್ಸ್ ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಾಗ, ಪೂರ್ವ ಮತ್ತು ಪಶ್ಚಿಮ ವ್ಯಾಪಾರದ ಬಾಗಿಲು ಮುಚ್ಚಿದಂತಾಯಿತು. ಇದರಿಂದಾಗಿ, ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಾಂಬಾರ ಪದಾರ್ಥಗಳಿಂದ ಹೆಚ್ಚಿನ ಲಾಧವು ಟರ್ಕರ ಪಾಲಾಯಿತು. ಇದರಿಂದಾಗಿ ಯುರೋಪಿಯನ್ನರು ಭಾರತಕ್ಕೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿಯಲೇಕಾದ ಪರಿಸ್ಥಿತಿ ಒದಗಿತು.

* ಸ್ಪೈನ್ ಮತ್ತು ಪೋರ್ಚುಗಲ್ ದೇಶಗಳು ಸಾಗರ ವ್ಯಾಪಾರಿಗಳಾದ ಅರಬ್ಬರ ವಿರುದ್ಧ ಸ್ಪರ್ಧಿಸಲು ಇಚ್ಚೆ ಹೊಂದಿದ್ದವು.

* ಹೊಸದೇಶಗಳನ್ನು ಕಂಡುಹಿಡಿದರೆ ಕ್ರೈಸ್ತಮತವನ್ನು ಹರಡಬಹುದೆಂಬ ಆಶಯವೂ ಇತ್ತು.

* ಪೂರ್ವ ದೇಶಗಳ ಕಡೆ ಸಮುದ್ರ ಪ್ರಯಾಣದ ಸಾಹಸಕ್ಕೆ ಕೈಹಾಕಿದ್ದು ಯುರೋಪಿಯನ್ನರಲ್ಲಿ ಕುತೂಹಲ ಕೆರಳಿಸಿತು.

* ನಾವಿಕರ ದಿಕ್ಸೂಚಿ ಮತ್ತು ಅಸ್ಟ್ರೋಲೋಬ್ ಉಪಕರಣಗಳು ನಾವಿಕರಿಗೆ ಸಮುದ್ರದಲ್ಲಿ ಸಂಚರಿಸಲು ಸಹಾಯಕವಾದವು. ನಕ್ಷೆಗಳು ಮತ್ತು ಭೂಪಟಗಳು ನಾವಿಕರಿಗೆ ಸಿಗುವಂತಾಯಿತು.

* ಯುರೋಪಿಯನ್ನರು ಲಾಭ ಗಳಿಸಲು ಚೀನಾ ಫಲವತ್ತಾದುದೆಂದು ನಂಬಿದ್ದರು.

ಭೂಶೋಧನೆಗಳು

* ಮಧ್ಯಯುಗದ ನಂತರ ಭೂ ಅನ್ವೇಷಣೆ ಕಾರ್ಯದಲ್ಲಿ ತೊಡಗಿದ ಮುಖ್ಯ ರಾಷ್ಟ್ರಗಳು ಪೋರ್ಚುಗಲ್ ಮತ್ತು ಸ್ಪೈನ್.

* ನಾವಿಕ ಹೆನ್ರಿಯು ಕಳುಹಿಸಿದ್ದ ನಾವಿಕರು ದೀರ್ಘಕಾಲ ಓಡಾಡಿ, ಆಫ್ರಿಕಾ ಖಂಡದ ಪಶ್ಚಿಮ ಕರಾವಳಿಯನ್ನು ಸಾಕಷ್ಟು ದಕ್ಷಿಣದವರೆಗೆ ಶೋಧಿಸಿದ್ದರು.

* ಭಾರ್ಥಲೋಮ್ಯೂ ಡಯಾಸ್ ಎಂಬ ನಾವಿಕನು ಆಫ್ರಿಕಾದ ದಕ್ಷಿಣ ಭಾಗವನ್ನು ತಲುಪಿ ಅದನ್ನು ಗುಡ್ ಹೋಪ್ ಭೂಶಿರ ಎಂದು ಕರೆದನು.

* ಕ್ರಿ.ಶ 1498ರಲ್ಲಿ ವಾಸ್ಕೋ ಡ ಗಾಮನು ಆಫ್ರಿಕಾದ ಗುಡ್ ಹೋಪ್ ಭೂಶಿರವನ್ನು ಸುತ್ತುಹಾಕಿ ಹಿಂದೂ ಮಹಾಸಾಗರವನ್ನು ದಾಟಿ ಭಾರತದ ಕಲ್ಲಿಕೋಟೆಯನ್ನು ತಲುಪಿದನು. ಸಾಗರಮಾರ್ಗದಿಂದ ಭಾರತವನ್ನು ತಲುಪುವ ಯುರೋಪಿಯನ್ನರ ಕನಸು ನನಸಾಯಿತು.

* ಜಿನೋವಾ ನಗರದ ನಾವಿಕ ಕ್ರಿಸ್ಟೋಫರ್ ಕೊಲಂಬಸ್ ಸ್ಪೈನ್ ನ ದೊರೆಯ ನೆರವಿನಿಂದ ಕ್ರಿ.ಶ 1492ರಲ್ಲಿ ಅಟ್ಲಾಂಟಿಕ್ ಸಾಗರವನ್ನು ದಾಟಿ ವೆಸ್ಟ್ ಇಂಡಿಸ್ ನ(ಕೆರಿಬಿಯನ್ಸ್) ಬಹಾಮ ದ್ವೀಪವನ್ನು ತಲುಪಿದನು.

* ಪೋರ್ಚುಗೀಸರ ಕಬ್ರಾಲ್ ಕ್ರಿ.ಶ 1500ರಲ್ಲಿ ಬ್ರೆಜಿಲ್ ತಲುಪಿದನು.

* ಬಲ್ಭೋವ ಪನಾಮ ಜಲಸಂಧಿ ಬಳಿ ಬೆಟ್ಟವೊಂದನ್ನು ಏರಿ ಪಶ್ಚಿಮಕ್ಕೆ ವಿಶಾಲ ಸಾಗರವನ್ನು ಕಂಡನು. ಇದೇ ಫೆಸಿಫಿಕ್ ಸಾಗರ.

* ಇನ್ನೊಬ್ಬ ಪೋರ್ಚುಗೀಸ್ ನಾವಿಕ ಫರ್ಡಿನಾಂಡ್ ಮೆಗಲನ್ ಭೂಶಿರವನ್ನು ಸುತ್ತುವರಿದ ಮೊದಲನೆಯವನು. ಸುಮಾರ ಐದು ತಿಂಗಳ ಕಾಲ ಪ್ರಯಾಣಿಸಿ ಕ್ರಿ.ಶ 1520ರಲ್ಲಿ ದಕ್ಷಿಣ ಅಮೇರಿಕಾವನ್ನು ತಲುಪಿದನು. ಅಲ್ಲಿಂದ ಹಿಂದೂ ಮಹಾಸಾಗರ ಮೂಲಕ ಫಿಲಿಫೈನ್ಸ್ ನ್ನು ತಲುಪಿದನು. ಒಂದು ಹಡಗು ಇಂದಿನ ಇಂಡೋನೇಷ್ಯ ದ್ವೀಪಗಳ ಮಧ್ಯದಲ್ಲಿ ಸಾಗಿ, ಭೂಮಿಯ ಪ್ರಥಮ ಪ್ರದಕ್ಷಿಣೆ ಹಾಕಿ ಕೇಪ್ ಆಫ್ ಗುಡ್ ಹೋಪ್ ಮಾರ್ಗವಾಗಿ ಸ್ಪೈನ್ ಗೆ ತಲುಪಿತು.

ಭೂಶೋಧನೆಯ ಪರಿಣಾಮಗಳು

* ನವಶೋಧಿತ ಪ್ರದೇಶಗಳಲ್ಲಿ ವಸಾಹತು ಮತ್ತು ಸಾಮ್ರಾಜ್ಯ ಕಟ್ಟಲು ಐರೋಪ್ಯ ದೇಶಗಳ ನಡುವೆ ಸ್ಪರ್ಧೆ ಪ್ರಾರಂಭವಾಯಿತು. ಅಮೇರಿಕಾ, ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿ ವಾಣಿಜ್ಯಕ್ಕಾಗಿ ಸ್ಪರ್ಧೆ ಹೆಚ್ಚಿತು. ಗೆದ್ದ ದೇಶಗಳ ಮೇಲೆ ವಾಣಿಜ್ಯದ ಏಕಸ್ವಾಮ್ಯ ಸಾಧಿಸಲು ಅನುವು ಮಾಡಿಕೊಟ್ಟಿತು.

* ವಸಾಹತುಗಳ ಕಚ್ಚಾ ವಸ್ತುಗಳಿಂದಾಗಿ ಯುರೋಪಿನ ಕಂಪನಿಗಳು ಐಶ್ವರ್ಯಭರಿತವಾದವು.

* ಐರೋಪ್ಯ ದೇಶಗಳಲ್ಲಿ ಬಂಡವಾಳಶಾಹಿ ಬೆಳೆದು ಕೈಗಾರಿಕಾ ಕ್ರಾಂತಿ ಆರಂಭವಾಯಿತು.

* ಕ್ರಿಶ್ಚಿಯನ್ ಮತ ಪ್ರಚಾರಕರು ಜಗತ್ತಿನ ಎಲ್ಲೆಡೆ ಹೋಗಿ ಕ್ರೈಸ್ತ ಮತದ ಪ್ರಚಾರ ಕೈಗೊಂಡರು.

* ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿ ಬೆಳವಣಿಗೆಯು ದೇಶಿಯರು ಮತ್ತು ವಿದೇಶಿಯರ ನಡುವೆ ವೈಮನಸ್ಸಿಗೆ ಕಾರಣವಾಯಿತು.

ಮತ ಸುಧಾರಣೆ

* ಕ್ರಿ.ಶ 16ನೇ ಶತಮಾನದಲ್ಲಿ ಯುರೋಪ್ ನಲ್ಲಿ ಉಂಟಾದ ಅತ್ಯಂತ ದೊಡ್ಡ ಮತ ಚಳುವಳಿಯೆಂದರೆ ರೋಮನ್ ಕ್ಯಾಥೋಲಿಕ್ ಚರ್ಚಿನ ಏಕಸ್ವಾಮ್ಯವನ್ನು ಪ್ರಶ್ನಿಸಿ ನಡೆದ ಬಂಡಾಯವೇ ಮತ ಸುಧಾರಣೆ. ಪ್ರಾಯಶಃ ಮಧ್ಯಯುಗದ ಸಂಸ್ಥೆಗಳಲ್ಲಿ ಚರ್ಚ್ ಬಹಳ ಪ್ರಧಾನವಾದುದಾಗಿತ್ತು.

* ಮತ ಸುಧಾರಣೆಯು ಹೊಸ ಯುಗದ ಉದಯವನ್ನು ಘೋಷಿಸಿತು. ಮಾರ್ಟಿನ್ ಲೂಥರನು ಆರಂಭಿಸಿದ ಮತ ಚಳುವಳಿಯು ಮತ ಸುಧಾರಣೆ ಎಂಬ ಹೆಸರನ್ನು ಪಡೆಯಿತು. ಈ ಚಳುವಳಿಯು ಕ್ರೈಸ್ತ ಮತದಲ್ಲಿ ಪ್ರಾಟಿಸ್ಟೆಂಟ್ ಮತ ಎಂಬ ಹೆಸರನ್ನು ಪಡೆಯಿತು.

ಮತ ಸುಧಾರಣೆ ಚಳುವಳಿಗೆ ಕಾರಣಗಳು

* ಅನೇಕ ಕ್ರೈಸ್ತ ಸನ್ಯಾಸಿಗಳು ಮತ್ತು ಪೋಪರು ತ್ಯಾಗ ಜೀವನವನ್ನು ನಡೆಸುವ ಬದಲಿಗೆ ಲೌಕಿಕ ಸುಖದಲ್ಲಿ ಮುಳುಗಿದರು. ಅನೇಕರು ನೀತಿಬಾಹಿರ ಕೃತ್ಯಗಳನ್ನು ನಡೆಸಿದರು. ಪೋಪರು ಧಾರ್ಮಿಕತೆಯನ್ನು ಸುಧಾರಿಸುವುದನ್ನು ಬಿಟ್ಟು ರಾಜಕೀಯದಲ್ಲಿ ಆಸಕ್ತಿ ವಹಿಸಿದರು. ಇಟಲಿಯ ಬೊಕಾಶಿಯೋ, ಹಾಲೆಂಡಿನ ಇರಾಸ್ಮಸ್ ಮತ್ತು ಇಂಗ್ಲೆಂಡಿನ ಜಾನ್ ವೈಕ್ಲಿಫ್ ಇಂತಹ ಕೃತ್ಯಗಳನ್ನು ಖಂಡಿಸಿದರು.

* ಪುರೋಹಿತ ವರ್ಗದವರಲ್ಲಿ ಎಲ್ಲರೂ ವಿದ್ವಾಂಸರಾಗಿರಲಿಲ್ಲ. ಅವರಿಗೆ ಚರ್ಚಿನ ನಂಬಿಕೆ, ವಿಧಾನಗಳನ್ನು ಟೀಕಿಸುವವರ ವಿರುದ್ಧ ವಾದ ಮಾಡಿ ಗೆಲ್ಲುವ ಸಾಮರ್ಥ್ಯವಿರಲಿಲ್ಲ.

* ಮಧ್ಯಯುಗದಲ್ಲಿ ಪೋಪರ ಮತ್ತು ಚಕ್ರವರ್ತಿಯ ನಡುವೆ ನಡೆದ ಕಲಹಗಳು ಚಕ್ರವರ್ತಿಯ ಸ್ವಾಭಿಮಾನ ಮತ್ತು ಗೌರವವನ್ನು ಕೆಣಕಿದವು.

* ರಾಷ್ಟ್ರೀಯ ಪ್ರಭುತ್ವಗಳು ಬೆಳೆದು ಬಲವಾದವು. ತಮ್ಮ ರಾಜ್ಯದ ಆಂತರಿಕ ವ್ಯವಹಾರದಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚಿನ ಅಥವಾ ಪೋಪರ ಹಸ್ತಕ್ಷೇಪವನ್ನು ಇಷ್ಟಪಡಲಿಲ್ಲ.

* ನವೋದಯದಿಂದ ಮೂಡಿದ ವೈಜ್ಞಾನಿಕ ದೃಷ್ಠಿ ಮತ್ತು ಕುತೂಹಲಗಳು ಯುರೋಪಿನ ಜನರಲ್ಲಿ ಇದನ್ನು ಧಾರ್ಮಿಕ ಸಮಸ್ಯೆಗಳಿಗೂ ಅನ್ವಯಿಸಬಹುದೆಂಬ ತಿರ್ಮಾನಕ್ಕೆ ಬರುವಂತೆ ಮಾಡಿದವು.

* ಮೂಲ ಭಾಷೆಯಿಂದ ಬೈಬಲ್ ನ್ನು ಇತರೆ ಭಾಷೆಗಳಿಗೆ ಭಾಷಾಂತರಿಸಿದ್ದುದನ್ನು ಚರ್ಚ್ ವಿರೋಧಿಸಿತು.

ಮಾರ್ಟಿನ್ ಲೂಥರ್(ಕ್ರಿ.ಶ 1483-1556)

* ಮಾರ್ಟಿನ್ ಲೂಥರನು ಆರಂಭಿಸಿದ ಧಾರ್ಮಿಕ ಚಳುವಳಿಯು “ಮತ ಸುಧಾರಣೆ” ಎಂಬ ಹೆಸರನ್ನು ಪಡೆಯಿತು. 

* ಮಾರ್ಟಿನ್ ಲೂಥರನು ಕ್ಯಾಥೋಲಿಕ್ ಚರ್ಚಿನವರ ಬೋಧನೆಗಳನ್ನು ತಿರಸ್ಕರಿಸಿದನು.

* 1571ರಲ್ಲಿ ಅವನು ಪಾಪಕ್ಷಮೆಯ ಪತ್ರಗಳನ್ನು ಮಾರುವುದರ ವಿರುದ್ಧ ಚರ್ಚಿನೊಡನೆ ವಿರೋಧವನ್ನು ಪ್ರಕಟಪಡಿಸಿದನು.

* ಜನತೆಯು ಮಾಡಿದ ಪಾಪಗಳಿಗೆ ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವು ಪೋಪರಿಗೆ ದೇವರಿಂದ ಕೊಡಲ್ಪಟ್ಟಿದೆ. ಏಸುಕ್ರಿಸ್ತ ಮತ್ತು ಪಾದ್ರಿಗಳು ಮಾಡಿದ ಒಳ್ಳೆಯ ಕಾರ್ಯಗಳಿಂದ ಇಂತಹ ಅಧಿಕಾರವನ್ನು ಅವರಿಗೆ ಕೊಡಲಾಗಿದೆ ಎಂಬುದು ಕ್ಯಾಥೋಲಿಕ್ ಚರ್ಚಿನವರ ಅಭಿಪ್ರಾಯವಾಗಿತ್ತು.

* ಈ ಬಗೆಯ ಪಾಪಕ್ಷಮೆಯನ್ನು ಪಡೆಯಲು ವ್ಯಕ್ತಿಯು ತಾನಾಗಿಯೇ ಒಳ್ಳೆಯ ಕಾರ್ಯವನ್ನು ಮಾಡಬೇಕಾಗಿತ್ತು. ಆದರೆ ಅನೇಕ ಸಂದರ್ಭಗಳಲ್ಲಿ ಹೀಗೆ ಮಾಡದೆ ಚರ್ಚಿಗೆ ಹಣ ಕೊಡುವ ದಾರಿಯನ್ನು ಹಿಡಿದು ಈ ಕ್ಷಮಾಪಣೆಯನ್ನು ಪಡೆಯುತ್ತಿದ್ದರು.

* ಪಾಪಕ್ಷಮೆಯ ಪತ್ರಗಳನ್ನು ಚರ್ಚಿನವರಿಂದ ಅದರ ಮಾರಾಟವನ್ನು ಪ್ರಬಲವಾಗಿ ವಿರೋಧಿಸಿದನು.

* ಮಾರ್ಟಿನ್ ಲೂಥರನ ಅನುಯಾಯಿಗಳಿಗೆ “ಪ್ರಾಟೆಸ್ಟೆಂಟ್”ರೆಂದು ಹೆಸರಾಯಿತು.

* ಜರ್ಮನಿಯ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಜನರು ಪ್ರಾಟೆಸ್ಟೆಂಟರಾದರು.

* ಮತ ಸುಧಾರಣೆಯು ಯುರೋಪಿನಲ್ಲಿ ಬೇರೆ ಮಾರ್ಗವನ್ನು ಹಿಡಿಯಿತು ಹಾಗೂ ಧಾರ್ಮಿಕ ವಾತಾವರಣವು ಕಲುಷಿತವಾಯಿತು.

* ಯುರೋಪಿನ ಅಧಿಕ ಸಂಖ್ಯೆಯ ಜನರು ಧಾರ್ಮಿಕ ನಂಬಿಕೆಗಳಿಗಾಗಿ ಪ್ರಾಣ ತೆತ್ತರು. ಇಲ್ಲವೆ ಸೆರೆಮನೆಗೆ ಹಾಕಾಲಾಯಿತು ಅಥವಾ ಆಸ್ತಿಯ ಹಕ್ಕನ್ನು ಕಸಿದುಕೊಳ್ಳಲಾಯಿತು.

* ರೋಮನ್ ಕ್ಯಾಥೋಲಿಕರು ತಮ್ಮ ಪ್ರಭಾವ ಹೆಚ್ಚಾಗಿದ್ದ ಕಡೆಗಳಲ್ಲಿ ಪ್ರಾಟೆಸ್ಟೆಂಟರಿಗೆ ಕಿರುಕುಳ ಕೊಡುತ್ತಿದ್ದರು. ಪ್ರತಿಯಾಗಿ ಧಾರ್ಮಿಕ ಸುಧಾರಣೆಗೆ ಸರ್ಕಾರದ ಸಹಾಯ ದೊರೆತ ಕಡೆಗಳಲ್ಲಿ ಪ್ರಾಟೆಸ್ಟೆಂಟರು ಕ್ಯಾಥೋಲಿಕರಿಗೆ ಕಿರುಕುಳ ನೀಡುತ್ತಿದ್ದರು.

* ಮೂವತ್ತು ವರ್ಷಗಳ ಯುದ್ಧವೂ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟರ ದ್ವೇಷ ಮತ್ತು ಹೋರಾಟಗಳ ಫಲವೇ ಆಗಿದೆ.

ಮತ ಸುಧಾರಣೆಯ ಪರಿಣಾಮಗಳು

* ಮತ ಸುಧಾರಣೆಯ ಪರಿಣಾಮವಾಗಿ ಕ್ರೈಸ್ತ ಪ್ರಪಂಚದ ಅಖಂಡತೆಗೆ ಪಟ್ಟು ಬಿದ್ದಿತು. ಕ್ರೈಸ್ತ ಮತವು ಮುಖ್ಯವಾಗಿ ಮೂರು ಶಾಖೆಗಳಾಗಿ ಒಡೆಯಿತು. ಅವು ಕ್ಯಾಥೋಲಿಕ್ ಚರ್ಚ್, ಆರ್ಥೋಡಾಕ್ಸ್ ಚರ್ಚ್ ಮತ್ತು ಪ್ರಾಟೆಸ್ಟೆಂಟ್ ಚರ್ಚ್.

* ಯುರೋಪಿನ ಅನೇಕ ದೇಶಗಳ ರಾಜರುಗಳು ಪೋಪ್ ನ ಹಿಡಿತದಿಂದ ಸ್ವತಂತ್ರರಾದರು.

* ಮತ ಸುಧಾರಣೆಯು ರಾಷ್ಟ್ರೀಯ ಪ್ರಭುತ್ವಗಳ ಉದಯಕ್ಕೆ ಕಾರಣವಾಯಿತು.

* ಮುಟ್ಟುಗೋಲು ಹಾಕಿಕೊಂಡು ಚರ್ಚಿನ ಸಂಪತ್ತನ್ನು ಆರ್ಥಿಕ ಅಭಿವೃದ್ಧಿಗಾಗಿ ಮಿನಿಯೋಗಿಸಲಾಯಿತು.

* ರಾಷ್ಟ್ರೀಯ ಭಾವನೆಗಳು ಇನ್ನಷ್ಟು ಬಲವಾದವು ಹಾಗೂ ಯುರೋಪಿನ ರಾಜರುಗಳು ಧಾರ್ಮಿಕ ಸಹಿಷ್ಣುತೆಯನ್ನು ಅಳವಡಿಸಿಕೊಂಡರು.

* ಈ ಚಳುವಳಿಯಿಂದಾಗಿ ಸಾಹಿತ್ಯ ಕ್ಷೇತ್ರ ಬೆಳೆಯಿತು. ಪ್ರಾದೇಶಿಕ ಭಾಷೆಗಳು ಐರೋಪ್ಯರ ಮನಸ್ಸಿನ ಮೇಲೆ ಪ್ರಭಾವ ಬೀರಿದವು.

* ಕ್ಯಾಥೋಲಿಕ್ ಚರ್ಚಿನಲ್ಲೇ ಸುಧಾರಣೆಯಾಗಿ, ಅದೇ ಮುಂದೆ “ಪ್ರತಿ ಸುಧಾರಣೆ” ಚಳುವಳಿಯಾಯಿತು.

ಪ್ರತಿ ಸುಧಾರಣಾ ಚಳುವಳಿ

* ಪ್ರಾಟೆಸ್ಟೆಂಟ್ ಪಂಥ ಶೀಘ್ರವಾಗಿ ಪ್ರಭಾವ ಪಡೆದು ಎಲ್ಲಾ ಕಡೆ ಹರಡಲಾರಂಭಿಸಿತು. ಇದರಿಂದ ಎಚ್ಚೆತ್ತ ಕ್ಯಾಥೋಲಿಕರು ತಮ್ಮ ಪಾರಮ್ಯವನ್ನು ಕಾಪಾಡಿಕೊಳ್ಳಲು ಸುಧಾರಣೆಯ ಅಗತ್ಯವನ್ನು ತಮ್ಮಲ್ಲಿಯೇ ಕಂಡುಕೊಂಡರು. 

* ಪ್ರಾಟೆಸ್ಟೆಂಟರ ವಾದವು ಜನರ ಗಮನವನ್ನು ಪರಿಣಾಮಕಾರಿಯಾಗಿ ಸೆಳೆಯಿತು. ಈ ಘಟನೆಯು ರೋಮನ್ ಚರ್ಚಿನ ಅಸ್ತಿತ್ವಕ್ಕೂ, ಉಳಿಯುವಿಕೆಗೂ ದೊಡ್ಡ ಆಘಾತವನ್ನುಂಟು ಮಾಡಿತು. ಚರ್ಚಿನ ಹಿತರಕ್ಷಣೆಗಾಗಿ ಏನನ್ನಾದರೂ ಅವಶ್ಯಕವಾಗಿ ಮಾಡಲೇಬೇಕಾಯಿತು. ಇಂತಹ ಅವಶ್ಯಕತೆಯೇ ಪ್ರತಿ ಸುಧಾರಣೆ ಎಂಬ ಚಳುವಳಿಗೆ ಜನ್ಮ ನೀಡಿತು.

* ಪ್ರಾಟೆಸ್ಟೆಂಟರ ಅಭಿವೃದ್ಧಿಯನ್ನು ತಡೆದು ರೋಮ್ ನ ಚರ್ಚ್ ಗಳಿಗಾಗಿದ್ದ ಹಾನಿಯನ್ನು ಸಾಕಷ್ಟು ಸರಿಪಡಿಸಬೇಕೆಂಬುದೇ ಈ ಚಳುವಳಿಯ ಉದ್ದೇಶವಾಗಿತ್ತು. ಆದುದರಿಂದ ಚರ್ಚ್ ಗಳಲ್ಲಿ ಆಂತರಿಕವಾದ ಸುಧಾರಣೆಗಳನ್ನು ಮಾಡಿ ಎಲ್ಲಾ ತೊಂದರೆಗಳಿಗೂ ಪರಿಹಾರವನ್ನು ಹುಡುಕುವ ಪ್ರಯತ್ನ ನಡೆಯಿತು. ಅಧಿಕಾರದ ದುರುಪಯೋಗವನ್ನು ತಡೆಗಟ್ಟಲಾಯಿತು. ಚರ್ಚ್ ಗಳ ಆಡಳಿತ ಕ್ರಮವನ್ನು ಸರಿಪಡಿಸಲಾಯಿತು.

* ಈ ಪ್ರತಿ ಸುಧಾರಣಾ ಚಳುವಳಿಯ ನಾಯಕ ಒಬ್ಬ ಸ್ಪ್ಯಾನಿಷ್ ಶ್ರೀಮಂತ, ಇಗ್ನೇಷಿಯಸ್ ಲಯೋಲ. ಇವನು 1540ರಲ್ಲಿ ಜೀಸಸ್ ಸೊಸೈಟಿಯನ್ನು ಹುಟ್ಟುಹಾಕಿದನು. ಇವರ ಪ್ರಮುಖ ಗುರಿ ರೋಮನ್ ಕ್ಯಾಥೋಲಿಕ್ ಚರ್ಚಿಗೆ ಅಧಿಕಾರವನ್ನು ಹಾಗೂ ಕಳೆದು ಹೋಗಿದ್ದ ಅದರ ವೈಭವವನ್ನು ಪುನಃ ಸ್ಥಾಪಿಸುವುದಾಗಿತ್ತು. ಈ ಸಂಘದ ಅನುಯಾಯಿಗಳಿಗೆ ಒಳ್ಳೆಯ ಶಿಕ್ಷಣ ಹಾಗೂ ತರಬೇತಿ ನೀಡಿ ಸಮಾಜದ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಗಿಸುವುದೇ ಉದ್ದೇಶವಾಗಿತ್ತು.

* ಚರ್ಚ್ ನ ನಿಯಮ ಉಲ್ಲಂಘಿಸುವವರನ್ನು ವಿಚಾರಣೆ ನಡೆಸುವ ಹಾಗೂ ಶಿಕ್ಷಿಸುವ ಉದ್ದೇಶದ “ಇಂಕ್ವಿಜಿಶನ್” ಎಂಬ ಧಾರ್ಮಿಕ ವಿಚಾರಣಾ ಪದ್ಧತಿ ಕ್ರಿ.ಶ 1542ರಿಂದ ಜಾರಿಗೆ ಬಂದಿತು. ಅಲ್ಲದೆ ಇದು ಕ್ಯಾಥೋಲಿಕರು ಪ್ರಾಟೆಸ್ಟೆಂಟ್ ಮತ ಸ್ವೀಕರಿಸುವುದನ್ನು ತಪ್ಪಿಸಿತು.  

ಕೈಗಾರಿಕಾ ಕ್ರಾಂತಿ

* ವಸಾಹತುಗಳ ಸ್ಥಾಪನೆಯಿಂದ ವ್ಯಾಪಾರ ಹೆಚ್ಚಿ, ಸಿದ್ಧಪಡಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಾಯಿತು. ಹಿಂದಿನಿಂದ ನಡೆದು ಬಂದ ಉತ್ಪಾದನಾ ಕ್ರಮಗಳು ಹೆಚ್ಚಿನ ಬೇಡಿಕೆಯನ್ನು ಈಡೇರಿಸಲು ಶಕ್ತವಾಗಿರಲಿಲ್ಲ. ಇದೇ ವೇಳೆಗೆ ಬೌದ್ಧಿಕ ಜಾಗೃತಿ ಉಂಟಾಯಿತಲ್ಲದೆ, ಲಾಭಗಳಿಕೆಯ ನಿರೀಕ್ಷೆಯೂ ಹೆಚ್ಚಾಯಿತು. ಈ ಅಂಶಗಳಿಂದ ಕೈಗಾರಿಕೆಯಲ್ಲಿ ನಿರತರಾಗಿದ್ದ ಅನೇಕರನ್ನು ಉತ್ಪಾದನಾ ವಿಧಾನಗಳನ್ನು ಉತ್ತಮಪಡಿಸಲು ಪ್ರೇರೇಪಿಸಿದರು.

* 18ನೇ ಶತಮಾನದ ಉತ್ರಾರ್ಧದಲ್ಲಿ ಹೊಸ ಹೊಸ ವಿಧಾನಗಳು ಕೈಗಾರಿಕೆ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ಬದಲಾವಣೆ ಉಂಟು ಮಾಡಿದವು. 1760 ರಿಂದ 1830ರವರೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಉಂಟಾದ ಅನೇಕ ಬದಲಾವಣೆಗಳಿಗೆ ‘ಕೈಗಾರಿಕಾ ಕ್ರಾಂತಿ’ ಎಂದು ಹೆಸರು ಬಂದಿತು.

* ಇದು ಪ್ರಾರಂಭವಾದದ್ದು ಇಂಗ್ಲೆಂಡಿನಲ್ಲಿ ಅನಂತರ ಇದು ಪ್ರಪಂಚದ ಇತರೆ ದೇಶಗಳಿಗೆ ಹರಡಿತು. ಕ್ರಾಂತಿ ಎಂದರೆ ಸಾಮಾನ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಆಗುವಂತಹ ಶೀಘ್ರಗತಿಯ ಮತ್ತು ಹಿಂಸಾತ್ಮಕವಾದ ಭಾರಿ ಬದಲಾವಣೆ. ಆದರೆ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಲ್ಲಿ ಆ ರೀತಿಯ ಶೀಘ್ರಗತಿಯ ಮತ್ತು ಹಿಂಸಾತ್ಮಕ ಬದಲಾವಣೆಗಳೇನೂ ಇರಲಿಲ್ಲ. ಬದಲಾವಣೆಗಳು ಮಂದಗತಿಯು, ಅನುಕ್ರಮವಾದವೂ ಮತ್ತು ಅವಿಚ್ಛಿನ್ನವಾದವೂ ಆಗಿದ್ದವು. ಆದರೆ ವ್ಯಾಪಕವಾದುವೂ, ಘನವಾದವೂ ಆಗಿದ್ದವು.

* ಕ್ರಿ.ಶ 1760ಕ್ಕೆ ಮುಂಚೆ ಇಂಗ್ಲೆಂಡ್ ಕೃಷಿ ಪ್ರಧಾನವಾದ ದೇಶವಾಗಿದ್ದರೂ ಉಣ್ಣೆ ಬಟ್ಟೆಗಳು ಮತ್ತು ಹತ್ತಿ ಬಟ್ಟೆಗಳ ಕೈಗಾರಿಕೆಗಳು ಅಭಿವೃದ್ಧಿ ಹೊಂದಿದ್ದವು. ವ್ಯಾಪಾರ ಹೆಚ್ಚಿದಂತೆಲ್ಲಾ ಸಿದ್ಧಪಡಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಿತು. ಆದರೆ ಬೇಡಿಕೆಗೆ ಸರಿಹೊಂದುವಂತಹ ಉತ್ಪಾದನೆ ಆಗುತ್ತಿರಲಿಲ್ಲ. ಕುಶಲ ಕರ್ಮಿಗಳು ಕಚ್ಚಾ ವಸ್ತುಗಳ ಮೇಲೆ ಹೆಚ್ಚು ಬಂಡವಾಳ ಹೂಡಿ ಉತ್ಪಾದನಾ ವಿಧಾನವನ್ನು ತ್ವರಿತಗೊಳಿಸುವಂತಿರಲಿಲ್ಲ. ಆದ್ದರಿಂದ ಕೆಲವು ಶ್ರೀಮಂತರು ಈ ಕುಶಲ ಕರ್ಮಿಗಳನ್ನು ಕೂಲಿಗೆ ನೇಮಿಸಿಕೊಂಡು ಅವರಿಗೆ ಕಚ್ಚಾವಸ್ತುಗಳನ್ನು ಒದಗಿಸಿ ಅವರು ಕಾರ್ಖಾನೆಗಳೆಂಬ ದೊಡ್ಡ ಕಟ್ಟಡಗಳಲ್ಲಿ ಕೆಲಸ ಮಾಡುವಂತೆ ಮಾಡಿದರು. ಇದೇ ಮುಂದೆ ಕಾರ್ಖಾನೆ ಪದ್ಧತಿಗೆ ನಾಂದಿಯಾಯಿತು. ಕಾರ್ಖಾನೆ ಮಾಲೀಕರು ಇಲ್ಲಿ ತಯಾರಾದ ವಸ್ತುಗಳನ್ನು ಮಾರಾಟ ಮಾಡಿ ಅಧಿಕ ಲಾಭ ಗಳಿಸಿದರೂ ಕುಶಲ ಕರ್ಮಿಗಳು ಹಾಗೂ ಇತರೆ ಕಾರ್ಮಿಕರು ಬಡವರಾಗಿಯೇ ಮುಂದುವರೆದರು.

* ಕ್ರಿ.ಶ 1760 ರಿಂದ 1830ರ ಅವಧಿಯಲ್ಲಿ ಇಂಗ್ಲೆಂಡಿನಲ್ಲಿ ಬಟ್ಟೆ ತಯಾರಿಕಾ ಕೈಗಾರಿಕೆಯಲ್ಲಿ ಮಹತ್ತರ ಬದಲಾವಣೆ ಉಂಟಾಯಿತು. 1764ರಲ್ಲಿ ಜೇಮ್ಸ್ ಹಾರ್ ಗ್ರೀವ್ಸ್ ಎಂಬುವನು ಸ್ಪಿನ್ನಿಂಗ್ ಜೇನ್ನಿ ಎಂಬ ನೂಲುವ ಯಂತ್ರವನ್ನು ಕಂಡುಹಿಡಿದನು. ಕೆಲವು ವರ್ಷಗಳ ನಂತರ ರಿಚರ್ಡ್ ಆರ್ಕ್ ರೈಟ್ ಎಂಬುವನು ಸ್ಪಿನ್ನಿಂಗ್ ಜೆನ್ನಿಯನ್ನು ಉತ್ತಮಪಡಿಸಿದನು ಹಾಗೂ 1769ರಲ್ಲಿ ಅವನು ನೀರಿನ ಚೌಕಟ್ಟನ್ನು ಕಂಡು ಹಿಡಿದನು.

* ಕ್ರಿ.ಶ 1779ರಲ್ಲಿ ಸ್ಯಾಮ್ಯುಯಲ್ ಕ್ಯಾಂಪ್ಟನ್ ಎಂಬುವನು ಮ್ಯೂಲ್ ಯಂತ್ರವನ್ನು ಕಂಡು ಹಿಡಿದನು. ಜಾನ್ ಕೇ ಎಂಬುವನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವ ಲಾಳವನ್ನು ಕಂಡುಹಿಡಿದನು. ಕ್ರಿ.ಶ 1785ರಲ್ಲಿ ಎಡ್ಮಂಡ್ ಕಾರ್ಟ್ ರೈಟ್ ಎಂಬುವನು ಪವರ್ ಲೂಮ್ ಎಂಬ ನೇಯ್ಗೆ ಯಂತ್ರವನ್ನು ಕಂಡುಹಿಡಿದನು. ಇದರಿಂದ ಅಲ್ಪ ಕಾಲದಲ್ಲಿ ಉತ್ಪಾದಿಸುವುದು ಸಾಧ್ಯವಾಯಿತು.

* ಕ್ರಿ.ಶ 1793ರಲ್ಲಿ ಎಲಿ ವಿಟ್ನಿ ಎಂಬುವನು ಕಾಟನ್ ಜಿನ್ ಎಂಬ ಯಂತ್ರವನ್ನು ಕಂಡುಹಿಡಿದನು. ಈ ಎಲ್ಲಾ ಅವಿಷ್ಕಾರಗಳು ನೂಲುವ, ನೇಯುವ ಮತ್ತು ಹತ್ತಿಯಿಂದ ಬೀಜವನ್ನು ಬೇರ್ಪಡಿಸುವುದಲ್ಲದೇ ತೀವ್ರಗತಿಯ ಉತ್ಪಾದನೆಗೆ ಕಾರಣವಾದವು.

* ಆವಿಯ ಯಂತ್ರದ ಅವಿಷ್ಕಾರ ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ತರವಾದ ಮೈಲಿಗಲ್ಲಾಯಿತು. ಕ್ರಿ.ಶ 1705ರಲ್ಲಿ ಥಾಮಸ್ ಮ್ಯಾಕೋಮೆಸ್ ನು ಒಂದು ಆವಿಯ ಯಂತ್ರವನ್ನು ಕಂಡುಹಿಡಿದನು. ಕ್ರಿ.ಶ 1774ರಲ್ಲಿ ಜೇಮ್ಸ್ ವ್ಯಾಟ್ ಎಂಬುವನು ಈ ಆವಿಯ ಯಂತ್ರವನ್ನು ಉತ್ತಮಪಡಿಸಿದನು. ಕ್ರಿ.ಶ 1801ರಲ್ಲಿ ರಿಚರ್ಡ್ ಟ್ರೆವೆಥಿಕ್ ಎಂಬುವನು ವ್ಯಾಟ್ ನ ಹಬೆ ಯಂತ್ರವನ್ನು ರೈಲು ಬಂಡಿಗೆ ಜೋಡಿಸಿ ರಸ್ತೆಯ ಮೇಲೆ ಚಲಿಸುವಂತೆ ಮಾಡಿದನು. ಆನಂತರ ಹಳಿಗಳ ಮೇಲೆ ಚಲಿಸುವ ಒಂದು ಸ್ವಯಂಚಾಲಿತ ಆವಿ ಎಂಜಿನನ್ನು ಕಂಡುಹಿಡಿದನು. ಜಾರ್ಜ್ ಸ್ಟೀವನ್ ಸನ್ ನು ಕ್ರಿ.ಶ 1815ರಲ್ಲಿ ಸಾಮಾನು ಸಾಗಣೆಯ ರೈಲು ಬಂಡಿಗಳನ್ನು ಕಂಡುಹಿಡಿದನು. ಇಂಗ್ಲೆಂಡಿನ ಸ್ವಾಕ್ ಟನ್ ಮತ್ತು ಡಾರ್ಲಿಂಗ್ ಟನ್ ಪಟ್ಟಣಗಳ ನಡುವೆ ಪ್ರಯಾಣಿಕರನ್ನು ಸಾಗಿಸುವ ಒಂದು ರೈಲನ್ನು ಮತ್ತು ಲಿವರ್ ಪೂಲ್ ಮತ್ತು ಮ್ಯಾಂಚೆಸ್ಟರ್ ಗಳ ನಡುವೆ ಕೈಗಾರಿಕಾ ಉತ್ಪನ್ನಗಳ ಸಾಗಾಣಿಕೆಗಾಗಿಯೇ ರೈಲು ಮಾರ್ಗವನ್ನು ನಿರ್ಮಿಸಲಾಯಿತು.

* ಕ್ರಿ.ಶ 1801ರಲ್ಲಿ ವಿಲಿಯಂ ಸಿಮಿಂಗ್ ಟನ್ ಎಂಬ ಅಮೇರಿಕನ್ನನು ವಾಡ್ಸನ ಒಂದು ಎಂಜಿನನ್ನು ಒಂದು ದೋಣಿಗೆ ಜೋಡಿಸಿ ಅದು ಚಲಿಸುವಂತೆ ಮಾಡಿದನು. ರಾಬರ್ಟ್ ಫುಲ್ಟನ್ ಎಂಬ ಮತ್ತೊಬ್ಬ ಅಮೇರಿಕಾದವನು ಮತ್ತೊಂದು ಆವಿಯ ಹಡಗನ್ನು ಕಂಡು ಹಿಡಿದನು.

ಪರಿಣಾಮಗಳು

* ಕೈಗಾರಿಕೆಗಳಲ್ಲಿ ಅನೇಕ ಬದಲಾವಣೆಗಳುಂಟಾಗಿ ಯಂತ್ರಗಳ ಬೇಡಿಕೆ ಹೆಚ್ಚಾಯಿತು.

* ಕೈಗಾರಿಕಾ ಕ್ರಾಂತಿಯಿಂದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳಾದವು.

* ಹೊಸ ಕೈಗಾರಿಕೆಗಳು ಹುಟ್ಟಿಕೊಂಡವು.

* ಉತ್ಪಾದನಾ ವೆಚ್ಚ ಕಡಿಮೆ ಆಗಿ ಜೀವನಾವಶ್ಯಕ ವಸ್ತುಗಳು ಅಗ್ಗದ ಬೆಲೆಗೆ ದೊರೆಯುವಂತಾದವು.

* ಗೃಹ ಕೈಗಾರಿಕೆಗಳು ಬೃಹತ್ ಪ್ರಮಾಣದ ಕೈಗಾರಿಕೆಗಳೊಡನೆ ಸ್ಪರ್ಧಿಸಲಾಗದೆ ನಾಶವಾದವು.

* ಶ್ರೀಮಂತರು ಶ್ರೀಮಂತರಾದರು ಹಾಗೂ ಬಡವರು ಬಡವರಾಗೇ ಮುಂದುವರೆದರು.

* ಹಳ್ಳಿಗಳಿಂದ ಪಟ್ಟಣಗಳಿಗೆ ಜನರು ವಲಸೆ ಬರಬೇಕಾಯಿತು.

ಸಮಾಜದಲ್ಲಿ ಬಂಡವಾಳಶಾಹಿ ವರ್ಗವು ಉದಯವಾಗಿ ಮಾಲೀಕರು ಮತ್ತು ಕೆಲಸಗಾರರ ನಡುವೆ ಬಾಂಧವ್ಯ ಹದಗೆಟ್ಟು ವರ್ಗ ಸಂಘರ್ಷವು ಪ್ರಾರಂಭವಾಯಿತು.

logoblog

Thanks for reading ಆಧುನಿಕ ಯುರೋಪ್

Previous
« Prev Post

No comments:

Post a Comment